ಸೇಲಂ: ಬೆಂಗಳೂರಿಗೆ ಹೊರಟಿದ್ದ ಬಸ್‌ಗೆ ಹೊತ್ತಿಕೊಂಡ ಬೆಂಕಿ, ಹತ್ತು ಮಂದಿ ಪ್ರಯಾಣಿಕರಿಗೆ ಸುಟ್ಟಗಾಯ
ಸೋಮವಾರ ಮುಂಜಾನೆ ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ವಾಹನದಿಂದ ಹಲವರು ಜಿಗಿದಿದ್ದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Published: 30th January 2023 04:47 PM | Last Updated: 30th January 2023 07:46 PM | A+A A-

ಸಾಂದರ್ಭಿಕ ಚಿತ್ರ
ಕೊಯಮತ್ತೂರು: ಸೋಮವಾರ ಮುಂಜಾನೆ ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ವಾಹನದಿಂದ ಹಲವರು ಜಿಗಿದಿದ್ದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದಾಗ್ಯೂ, ಕೆಲವು ಮಹಿಳೆಯರು ಸೇರಿದಂತೆ 10 ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಮೆಟ್ಟೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಯಮತ್ತೂರಿನಿಂದ ಬರುತ್ತಿದ್ದ 43 ಪ್ರಯಾಣಿಕರಿದ್ದ ಬಸ್ ಪುದುಚಂಪಲ್ಲಿ ತಲುಪಿದಾಗ ಮಧ್ಯರಾತ್ರಿ 1.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಮತ್ತು ಇಡೀ ವಾಹನಕ್ಕೆ ವ್ಯಾಪಿಸಿದೆ. ಬಸ್ಸಿನ ಮುಂಭಾಗದಿಂದ ದಟ್ಟವಾದ ಹೊಗೆ ಬರಲಾರಂಭಿಸಿದ ಕಾರಣ ಚಾಲಕ ಬಸ್‌ನಿಂದ ಹೊರಗೆ ಹಾರುವಂತೆ ಎಚ್ಚರಿಕೆ ನೀಡಿದ್ದಾರೆ.
ಬಳಿಕ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಮುಂಭಾಗ, ಹಿಂಬದಿ ಮತ್ತು ಪಾರ್ಶ್ವದ ವಿಂಡ್‌ಶೀಲ್ಡ್‌ಗಳನ್ನು ಮುರಿದು ಸುರಕ್ಷತವಾಗಿ ಕೆಳಗೆ ಜಿಗಿದಿದ್ದಾರೆ ಎಂದು ಅವರು ಹೇಳಿದರು.
ಅಗ್ನಿಶಾಮಕ ಮತ್ತು ರಕ್ಷಣಾ ಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಒಂದು ಗಂಟೆಯ ನಂತರ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಯಾಣಿಕರ ವಸ್ತುಗಳು ಸೇರಿದಂತೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಬೆಂಕಿ ಹೊತ್ತಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.