
ಆಫ್ರಿಕನ್ ಹಂದಿ ಜ್ವರ
ತಿರುವನಂತಪುರಂ: ಕೇರಳದ 2 ಖಾಸಗಿ ಹೊಲದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ. ಕೊಟ್ಟಾಯಂ ಬಳಿ ಇರುವ ಉಳವೂರು ಪಂಚಾಯತ್ ನಲ್ಲಿ ಹಂದಿ ಜ್ವರದ 2 ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾ ಅಧಿಕಾರಿಗಳು ಹೇಳಿದ್ದಾರೆ.
ಹಂದಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಒಂದು ಕಿ.ಮೀ ವ್ಯಾಪ್ತಿಯಲ್ಲಿ 66 ಹಂದಿಗಳನ್ನು ಹತ್ಯೆ ಮಾಡುವುದಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲಾಧಿಕಾರಿ ಪಿಕೆ ಜಯಶ್ರೀ ಈ ಬಗ್ಗೆ ಮಾತನಾಡಿದ್ದು, ಹಂದಿ ಜ್ವರ ಪತ್ತೆಯಾಗಿರುವ ಹೊಲಗಳಲ್ಲಿರುವ ಹಂದಿಗಳನ್ನು ಕೊಲ್ಲಲಾಗಿದೆ ಹಾಗೂ ಮೃತ ಹಂದಿಗಳನ್ನು ನಿಯಮಗಳ ಪ್ರಕಾರ ದಹನ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮುನ್ನೆಚ್ಚರಿಕ ಕ್ರಮವಾಗಿ ಹಂದಿಗಳನ್ನು ಕೊಲ್ಲುವ ಪ್ರಕ್ರಿಯೆ ಆರಂಭವಾಗಿದ್ದು, ರಾತ್ರಿ ವೇಳೆಗೆ ಮುಗಿಯಲಿದೆ. ಈ ಹೊಲ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳನ್ನು ಶುಚಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಂದಿ ಜ್ವರ ಹರಡದಂತೆ ಕ್ರಮ ವಹಿಸಲು ಪಶುಸಂಗೋಪನಾ ಇಲಾಖೆ ಕ್ರಮಗಳನ್ನು ಕೈಗೊಂಡಿದೆ.