
ಸಿಎಂ ಜಗನ್ ಮೋಹನ್ ರೆಡ್ಡಿ
ಅಮರಾವತಿ: ಆಂಧ್ರಪ್ರದೇಶದ ನೂತನ ರಾಜಧಾನಿಯಾಗಿ ವಿಶಾಖಪಟ್ಟಣ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ಸಿಎಂ ಜಗನ್ ಮೋಹನ್ ರೆಡ್ಡಿ ಮಂಗಳವಾರ ಘೋಷಣೆ ಮಾಡಿದ್ದಾರೆ.
ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಜಗನ್ ಮೋಹನ್ ರೆಡ್ಡಿ, ವಿಶಾಖಪಟ್ಟಣ(ವೈಝಾಗ್) ನಮ್ಮ ರಾಜ್ಯದ ಹೊಸ ರಾಜಧಾನಿಯಾಗಲಿದೆ ಎಂದು ಘೋಷಣೆ ಮಾಡಿದ್ದಾರೆ.
“ನಮ್ಮ ರಾಜಧಾನಿಯಾಗಿರುವ ವಿಶಾಖಪಟ್ಟಣಕ್ಕೆ ನಿಮ್ಮನ್ನು ಆಹ್ವಾನಿಸಲು ನಾನು ಇಲ್ಲಿದ್ದೇನೆ. ನಾನು ಕೂಡ ವೈಝಾಗ್‌ಗೆ ಶಿಫ್ಟ್ ಆಗುತ್ತೇನೆ. ಆಂಧ್ರಪ್ರದೇಶದಲ್ಲಿ ವ್ಯಾಪಾರ ಮಾಡುವುದು ಎಷ್ಟು ಸುಲಭ ಎಂದು ನೀವೇ ನೋಡಲು ನಾನು ನಿಮ್ಮನ್ನು ಹಾಗೂ ನಿಮ್ಮ ಸಹೋದ್ಯೋಗಿಗಳನ್ನು ಆಹ್ವಾನಿಸುತ್ತೇನೆ" ಎಂದು ಸಿಎಂ ಜಗನ್ ರೆಡ್ಡಿ ಹೇಳಿದರು.
ಇದನ್ನೂ ಓದಿ: ಮೈತ್ರಿ ಮಾತಿನ ನಡುವೆ ಚಂದ್ರಬಾಬು ನಾಯ್ಡು ಭೇಟಿಯಾದ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್
ಮಾರ್ಚ್ 3 ಮತ್ತು 4 ರಂದು ಬಂದರು ನಗರದಲ್ಲಿ ಶೃಂಗಸಭೆ ನಡೆಯಲಿದ್ದು, ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಸಿಎಂ ಜಗನ್, ಜಾಗತಿಕ ಹೂಡಿಕೆದಾರರು, ರಾಜತಾಂತ್ರಿಕರು ಮತ್ತು ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಿದರು. ಸಭೆಯಲ್ಲಿ ತಮ್ಮ ಸಂಕ್ಷಿಪ್ತ ಭಾಷಣದಲ್ಲಿ, ಮುಖ್ಯಮಂತ್ರಿಯವರು ಆಂಧ್ರಪ್ರದೇಶದ ಅನುಕೂಲಗಳನ್ನು ಎತ್ತಿ ತೋರಿಸಿದ ಸಿಎಂ ಜಗನ್, ಶೇಕಡಾ 11.43 GSDP ಯೊಂದಿಗೆ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಜ್ಯ ಆಂಧ್ರ ಪ್ರದೇಶ ಎಂದು ಬಣ್ಣಿಸಿದರು. ಕಳೆದ ಮೂರು ವರ್ಷಗಳಿಂದ ಸತತವಾಗಿ ಆಂಧ್ರಪ್ರದೇಶವು ಕೈಗಾರಿಕೋದ್ಯಮಿಗಳ ದೃಷ್ಟಿಕೋನದಿಂದ ವ್ಯವಹಾರವನ್ನು ಸುಲಭಗೊಳಿಸುವಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
974 ಕಿಮೀ ಉದ್ದದ ಕರಾವಳಿ ನಗರವನ್ನು ರಾಜಧಾನಿಯಾಗಿ ಸೂಚಿಸಿದ ಮುಖ್ಯಮಂತ್ರಿ ಜಗನ್ ರೆಡ್ಡಿ, ರಾಜ್ಯದಲ್ಲಿ ಇನ್ನೂ ನಾಲ್ಕು ಬಂದರುಗಳು ಮತ್ತು ಆರು ವಿಮಾನ ನಿಲ್ದಾಣಗಳು ಬರಲಿವೆ.. ದೇಶದ 11 ಕೈಗಾರಿಕಾ ಕಾರಿಡಾರ್‌ಗಳಲ್ಲಿ ಮೂರನ್ನು ಆಂಧ್ರಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಕೈಗಾರಿಕಾ ಸಮುದಾಯಕ್ಕೆ ರಾಜ್ಯವು ನೀಡುವ ಸಂಪರ್ಕವನ್ನು ಎತ್ತಿ ತೋರಿಸಿದರು. ಅಂತೆಯೇ ವಿವಿಧ ಖನಿಜ-ನಿರ್ದಿಷ್ಟ ಕೈಗಾರಿಕೆಗಳಿಗೆ ಸೂಕ್ತವಾದ 48 ಖನಿಜಗಳ ನಿಧಿಯನ್ನು ರಾಜ್ಯ ಹೊಂದಿದೆ. ಅತ್ಯಂತ ಮುಖ್ಯವಾಗಿ, ನಾವು ಒಂದೇ ಡೆಸ್ಕ್ ಪೋರ್ಟಲ್ ಅನ್ನು ಹೊಂದಿದ್ದೇವೆ, ಅಲ್ಲಿ ಎಲ್ಲಾ ಅನುಮೋದನೆಗಳನ್ನು 21 ದಿನಗಳಲ್ಲಿ ನೀಡಲಾಗುತ್ತದೆ. ಇದು ನಾವು ಎಷ್ಟು ವೇಗವಾಗಿ ಕೆಲಸ ಮಾಡುತ್ತೇವೆ ಮತ್ತು ವೇಗವಾಗಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಬೈ ಭೇಟಿ ವೇಳೆ ಭದ್ರತಾ ಲೋಪ, ಆಂಧ್ರ ಪ್ರದೇಶದ ಅಧಿಕಾರಿ ಬಂಧನ!
ರಾಜ್ಯದಲ್ಲಿ ನಾಲ್ಕು ಎಲೆಕ್ಟ್ರಾನಿಕ್ ಕ್ಲಸ್ಟರ್‌ಗಳಿದ್ದು, ಎರಡು ಟಾಯ್ ಕ್ಲಸ್ಟರ್‌ಗಳು, ಎರಡು ಆಹಾರ ಸಂಸ್ಕರಣಾ ಕ್ಲಸ್ಟರ್‌ಗಳು 10 ಜವಳಿ ಪಾರ್ಕ್ ಕ್ಲಸ್ಟರ್‌ಗಳು, ಎರಡು ಸಿಮೆಂಟ್ ಕ್ಲಸ್ಟರ್‌ಗಳು, ಒಂದು ವೈದ್ಯಕೀಯ ಸಾಧನ ತಯಾರಿಕಾ ಕ್ಲಸ್ಟರ್, ಎರಡು ಫಾರ್ಮಾ ಕ್ಲಸ್ಟರ್‌ಗಳು ಮತ್ತು ನಾಲ್ಕು ಆಟೋಮೊಬೈಲ್ ಕ್ಲಸ್ಟರ್‌ಗಳು ಜೊತೆಗೆ ಪ್ಲಗ್ ಮತ್ತು ಪ್ಲೇ ಮಾಡ್ಯೂಲ್‌ಗಳು ಇವೆ ಎಂದು ಅವರು ಹೇಳಿದರು.
ವಿಶಾಖಪಟ್ಟಣ
ಆಂಧ್ರ ಪ್ರದೇಶದ ನೂತನ ರಾಜಧಾನಿಯಾಗಿ ವಿಶಾಖಪಟ್ಟಣಂ ಕಾರ್ಯ ನಿರ್ವಹಿಸಲಿದ್ದು, ಮುಖ್ಯಮಂತ್ರಿ ಕಛೇರಿ ಸೇರಿದಂತೆ ಹಲವು ಕಛೇರಿಗಳು ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ. ವಿಶಾಖಪಟ್ಟಣದಲ್ಲಿ ಈಗಾಗಲೇ ಸರ್ಕಾರದ ಮುಖ್ಯ ಕಛೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ ಹಲವು ಪ್ರಮುಖ ಕಛೇರಿಗಳು ಸ್ಥಳಾಂತರಗೊಳ್ಳಲಿವೆ.
ಈ ಹಿಂದೆ ಅಮರಾವತಿಯನ್ನು ಆಂಧ್ರ ರಾಜಧಾನಿಯನ್ನಾಗಿ ಮಾಡಲು ಈ ಮೊದಲಿನಿಂದಲೂ ಜಗನ್‌ಮೋಹನ್ ರೆಡ್ಡಿ ವಿರೋಧಿಸಿಕೊಂಡು ಬಂದಿದ್ದು, ಇದೀಗ ವಿಶಾಖಪಟ್ಟಣದಿಂದಲೇ ಸರ್ಕಾರ ಕಾರ್ಯ ನಿರ್ವಹಿಸಲಿದೆ.
ಇದನ್ನೂ ಓದಿ: ಆಂಧ್ರ ಪ್ರದೇಶದಲ್ಲಿ ಮತ್ತೆ ಗಣಿಗಾರಿಕೆ ಆರಂಭಿಸಲು ಮಾಜಿ ಸಚಿವ ಜನಾರ್ಧನ ರೆಡ್ಡಿ ಸಜ್ಜು?
2014 ರಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣ ರಾಜ್ಯ ರಚನೆಯಾದಾಗ ಹೊಸ ರಾಜ್ಯವು ಹೈದರಾಬಾದ್ ಅನ್ನು ತನ್ನ ರಾಜಧಾನಿಯಾಗಿ ಪಡೆಯಿತು. ಬಳಿಕ 2015 ರಲ್ಲಿ ಟಿಡಿಪಿಯ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಕೃಷ್ಣಾ ನದಿಯ ದಡದಲ್ಲಿರುವ ವಿಜಯವಾಡ-ಗುಂಟೂರು ಪ್ರದೇಶದಲ್ಲಿನ ಅಮರಾವತಿಯನ್ನು ಹೊಸ ರಾಜಧಾನಿಯಾಗಿ ರೂಪಿಸುವುದಾಗಿ ಘೋಷಿಸಿತ್ತು. ನಂತರ 2020 ರಲ್ಲಿ ರಾಜ್ಯ ಸರ್ಕಾರವು ಅಮರಾವತಿ, ವಿಶಾಖಪಟ್ಟಣಂ ಹಾಗೂ ಕರ್ನೂಲ್ ಸೇರಿದ ಮೂರು ರಾಜಧಾನಿಗಳನ್ನು ಹೊಂದಲು ಯೋಜಿಸಿತ್ತು. ಅಮರಾವತಿ ಔಪಚಾರಿಕವಾಗಿ ರಾಜಧಾನಿಯಾಗಿ ಉಳಿಯಿತು. ಇದೀಗ ವಿಶಾಖಪಟ್ಟಣವನ್ನು ರಾಜಧಾನಿಯಾಗಿ ಘೋಷಣೆ ಮಾಡಲಾಗಿದೆ.