ವಿಸ್ತಾರಾ ಸಿಬ್ಬಂದಿ ಮೇಲೆ ಹಲ್ಲೆ, ಅರೆ ನಗ್ನಳಾಗಿ ವಿಮಾನದಲ್ಲಿ ಓಡಾಟ; ರಂಪಾಟ ನಡೆಸಿದ ಇಟಲಿ ಮಹಿಳೆ ಪೊಲೀಸರ ಅತಿಥಿ
ಅಬುಧಾಬಿಯಿಂದ ಮುಂಬೈಗೆ ಆಗಮಿಸಿದ ವಿಸ್ತಾರಾ ವಿಮಾನದಲ್ಲಿ ಸೋಮವಾರ ಇಟಲಿಯ ಮಹಿಳಾ ಪ್ರಯಾಣಿಕರೊಬ್ಬರು ಅರೆಬೆತ್ತಲಾಗಿ ಓಡಾಡಿದ್ದಲ್ಲದೇ ಗಲಾಟೆ ನಡೆಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪೊಲೀಸರ ಅತಿಥಿಯಾಗಿದ್ದಾಳೆ.
Published: 31st January 2023 01:58 PM | Last Updated: 31st January 2023 07:19 PM | A+A A-

ಸಾಂದರ್ಭಿಕ ಚಿತ್ರ
ಮುಂಬಯಿ: ಅಬುಧಾಬಿಯಿಂದ ಮುಂಬೈಗೆ ಆಗಮಿಸಿದ ವಿಸ್ತಾರಾ ವಿಮಾನದಲ್ಲಿ ಸೋಮವಾರ ಇಟಲಿಯ ಮಹಿಳಾ ಪ್ರಯಾಣಿಕೆ ಅರೆಬೆತ್ತಲಾಗಿ ಓಡಾಡಿದ್ದಲ್ಲದೇ ಗಲಾಟೆ ನಡೆಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪೊಲೀಸರ ಅತಿಥಿಯಾಗಿದ್ದಾಳೆ.
ವಿಸ್ತಾರಾ ಏರ್‌ಲೈನ್ಸ್ ವಿಮಾನದಲ್ಲಿ ಇಟಲಿಯ 45 ವರ್ಷದ ಮಹಿಳೆಯೊಬ್ಬರು ರಂಪಾಟ ನಡೆಸಿ, ವಿಸ್ತಾರಾ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಎಕಾನಮಿ ಕ್ಲಾಸ್ ಟಿಕೆಟ್ ಹೊಂದಿದ್ದ ಪಾವೊಲಾ ಪೆರುಕ್ಕಿಯೋ ಎಂಬಾಕೆ, ಬಿಜಿನೆಸ್ ಕ್ಲಾಸ್ ನಲ್ಲಿ ಕೂರಬೇಕು ಎಂದು ಪಟ್ಟುಹಿಡಿದಿದ್ದಾರೆ.
ಅದಕ್ಕೆ ತಡೆಯೊಡ್ಡಿದ ಸಿಬ್ಬಂದಿಯ ಮುಖಕ್ಕೆ ಗುದ್ದಿ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಿಬ್ಬಂದಿ ಮೇಲೆ ಉಗುಳಿದ್ದಾರೆ. ಬಳಿಕ ವಿಮಾನದಲ್ಲಿ ಅರೆನಗ್ನಳಾಗಿ ಓಡಾಡಿದ್ದಾರೆ. ವಿಮಾನದ ಸಿಬ್ಬಂದಿಯ ದೂರಿನ ಅನ್ವಯ ಮುಂಬಯಿ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಆದರೆ ಮುಂಬಯಿ ಕೋರ್ಟ್ ಒಂದು ಅವರಿಗೆ ಜಾಮೀನು ಮಂಜೂರು ಮಾಡಿದೆ. ವಿಮಾನದಲ್ಲಿ ಆಕಾಶದ ನಡುವೆ ಅನುಚಿತ ಹಾಗೂ ಹಿಂಸಾತ್ಮಕ ವರ್ತನೆಗಾಗಿ ಪಾವೊಲಾ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಪ್ರಯಾಣಿಕರ ಅಶಿಸ್ತಿನ ವರ್ತನೆ ಬೆನ್ನಲ್ಲೇ 'ಎಣ್ಣೆ ನೀತಿ' ಮಾರ್ಪಡಿಸಿದ ಏರ್ ಇಂಡಿಯಾ
"ಅನುಚಿತ ವರ್ತನೆ ಮತ್ತು ಹಿಂಸಾತ್ಮಕ ನಡವಳಿಕೆ ಮುಂದುವರಿದ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅವರು ಎಚ್ಚರಿಕೆ ಕಾರ್ಡ್ ನೀಡಿದ್ದರು ಹಾಗೂ ಪ್ರಯಾಣಿಕಳನ್ನು ನಿರ್ಬಂಧಿಸಲು ನಿರ್ಧಾರ ಕೈಗೊಂಡರು. ವಿಮಾನದಲ್ಲಿದ್ದ ಇತರೆ ಗ್ರಾಹಕರ ಸುರಕ್ಷತೆ ಮತ್ತು ಭದ್ರತೆಗೆ ಖಾತರಿ ನೀಡುವ ಪ್ರಕಟಣೆಗಳನ್ನು ಪೈಲಟ್ ನಿರಂತರವಾಗಿ ಮಾಡುತ್ತಿದ್ದರು. ಮಾರ್ಗಸೂಚಿಗಳು ಮತ್ತು ನಮ್ಮ ಕಠಿಣ ಎಸ್‌ಒಪಿಗಳಿಗೆ ಅನುಗುಣವಾಗಿ, ವಿಮಾನ ನಿಲ್ದಾಣದಲ್ಲಿನ ನಮ್ಮ ಭದ್ರತಾ ಸಂಸ್ಥೆಗಳು, ವಿಮಾನ ಕೆಳಕ್ಕಿಳಿದ ಕೂಡಲೇ ಸೂಕ್ತ ಕ್ರಮ ಕೈಗೊಂಡಿದ್ದಾರೆ" ಎಂದು ವಿಸ್ತಾರಾ ಸಂಸ್ಥೆ ಹೇಳಿಕೆ ನೀಡಿದೆ.
ತಮ್ಮ ಬಟ್ಟೆಗಳನ್ನು ಕಳಚಿದ ಮಹಿಳೆ, ವಿಮಾನದಲ್ಲಿ ಅರೆ ನಗ್ನಾವಸ್ಥೆಯಲ್ಲಿ ಅತ್ತಿಂದಿತ್ತ ಓಡಾಡಿದ್ದಾರೆ. ವಿಮಾನ ಸಿಬ್ಬಂದಿಯನ್ನು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ.