ಮುಂಬೈ: ಮಾಜಿ ಶಾಸಕ ಶಿಶಿರ್ ಶಿಂಧೆ ಅವರು ಸೋಮವಾರ ತಮ್ಮ ಬೆಂಬಲಿಗರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಿದ್ದಾರೆ.
ಈ ಹಿಂದೆ ಅವಿಭಜಿತ ಶಿವಸೇನೆ ಮತ್ತು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನಿರ್ಮಾಣ ಸೇನೆಯಲ್ಲಿದ್ದ ಶಿಶಿರ್ ಶಿಂಧೆ, ಕಳೆದ ತಿಂಗಳು ಉದ್ಧವ್ ಠಾಕ್ರೆ ನೇತೃತ್ವದ ಸೇನಾ ಬಣವನ್ನು ತೊರೆದಿದ್ದರು. ಈಗ ಶಿಂಧೆ ನೇತೃತ್ವದ ಶಿವಸೇನೆ ಸೇರಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಿಂಧೆ, ತಾವು ಕ್ರಿಯಾಶೀಲ ತಳಮಟ್ಟದ ಕಾರ್ಯಕರ್ತನಾಗಿದ್ದು, ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಏಕನಾಥ್ ಶಿಂಧೆ ಅವರೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ಫೈರ್‌ಬ್ರಾಂಡ್ ಶಿವಸೇನಾ ನಾಯಕರಾಗಿದ್ದ ಶಿಂಧೆ ಅವರು 1991ರಲ್ಲಿ ಪಕ್ಷದ ಇತರ ಕಾರ್ಯಕರ್ತರೊಂದಿಗೆ ಭಾರತ-ಪಾಕಿಸ್ತಾನ ಪಂದ್ಯ ವಿರೋಧಿಸಿ ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್ ಅಗೆದು ಪ್ರತಿಭಟಿಸಿದ್ದರು.
ಶಿಶಿರ್ ಶಿಂಧೆ ಅವರು ಶಿವಸೇನೆಯ ಉಪನಾಯಕರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದ್ದಾರೆ.
Advertisement