ಆಂಧ್ರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಕಾಲುವೆಗೆ ಬಿದ್ದ ಬಸ್, 7 ಮಂದಿ ದುರ್ಮರಣ
ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ಸೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ 7 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ಪ್ರಕಾಶಂ ಜಿಲ್ಲೆಯ ದರ್ಶಿ ಎಂಬಲ್ಲಿ ನಡೆದಿದೆ.
Published: 11th July 2023 08:54 AM | Last Updated: 11th July 2023 01:58 PM | A+A A-

ಸಂಗ್ರಹ ಚಿತ್ರ
ಪ್ರಕಾಶಂ (ಆಂಧ್ರ ಪ್ರದೇಶ): ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ಸೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ 7 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ಪ್ರಕಾಶಂ ಜಿಲ್ಲೆಯ ದರ್ಶಿ ಎಂಬಲ್ಲಿ ನಡೆದಿದೆ.
ಅಪಘಾತಕ್ಕೀಡಾದ ಸಂದರ್ಭದಲ್ಲಿ ಬಸ್ ನಲ್ಲಿ 47 ಮಂದಿ ಇದ್ದರು ಎಂದು ತಿಳಿದುಬಂದಿದೆ. ಈ ಪೈಕಿ 7 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತಕ್ಕೀಡಾದವರು ಮದುವೆ ಆರತಕ್ಷತೆಗಾಗಿ ಕಾಕಿನಾಡಕ್ಕೆ ತೆರಳಲು ಬಸ್ ಬಾಡಿಗೆಗೆ ಪಡೆದಿದ್ದರು. ಚಾಲಕ ನಿದ್ರೆಗೆ ಜಾರಿದ್ದ ಕಾರಣ ಬಸ್ ನಾಲೆಗೆ ಉರುಳಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೃತರನ್ನು ಪೊದಿಲಿ ಗ್ರಾಮದ ಅಬ್ದುಲ್ ಅಜೀಜ್ (65), ಅಬ್ದುಲ್ ಹನಿ (60), ಶೇಖ್ ರಮೀಜ್ (48), ಮುಲ್ಲಾ ನೂರ್ಜಹಾನ್ (58), ಮುಲ್ಲಾ ಜಾನಿ ಬೇಗಂ (65), ಶೇಖ್ ಶಬೀನಾ (35) ಮತ್ತು ಶೇಖ್ ಹೀನಾ (6) ಎಂದು ಗುರ್ತಿಸಲಾಗಿದೆ.
ಘಟನೆಯಲ್ಲಿ 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಕಿನಾಡದ ಯುವಕನಿಗೆ ಪ್ರಕಾಶಂ ಜಿಲ್ಲೆಯ ಪೊಡಿಲಿ ಗ್ರಾಮದ ಸಿರಾಜ್ ಎಂಬವರ ಮಗಳ ಮದುವೆ ಸೋಮವಾರ ಪೊಡಿಲಿ ಗ್ರಾಮದಲ್ಲಿ ನೆರವೇರಿತ್ತು. ಮದುವೆ ನಂತರ ನಂತರ ನವದಂಪತಿ ಮತ್ತು ಪೋಷಕರು ಕಾರುಗಳಲ್ಲಿ ಕಾಕಿನಾಡಕ್ಕೆ ತೆರಳಿದ್ದರು.
ವಧುವಿನ ಸಂಬಂಧಿಗಳಿಗಾಗಿ ಆರ್ಟಿಸಿ ಬಸ್ ಬಾಡಿಗೆ ಪಡೆದು ಕಾಕಿನಾಡಕ್ಕೆ ಪ್ರಯಾಣ ಬೆಳೆಸುತ್ತಿದ್ದರು. ಪೊಡಿಲಿಯಿಂದ 20 ಕಿಲೋಮೀಟರ್ ಪ್ರಯಾಣಿಸಿದ ನಂತರ ದರ್ಶಿ ಎಂಬಲ್ಲಿ ಬಸ್ ನಿಯಂತ್ರಣ ತಪ್ಪಿ ಅಲ್ಲಿದ್ದ ಕಾಲುವೆಗೆ ಉರುಳಿಬಿದ್ದಿದೆ.