ಜುಲೈ 17-18ರಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕರ ಸಭೆ: ಸಮಾನ ಮನಸ್ಕ ನಾಯಕರುಗಳಿಗೆ ಮಲ್ಲಿಕಾರ್ಜುನ ಖರ್ಗೆ ಆಹ್ವಾನ
ಇದೇ ತಿಂಗಳ ಜುಲೈ 17 ಮತ್ತು 18ರಂದು ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ವಿಪಕ್ಷ ನಾಯಕರ ಸಭೆ ನಡೆಯಲಿದ್ದು ಅದಕ್ಕೆ ಸಮಾನ ಮನಸ್ಕ ಉನ್ನತ ಮಟ್ಟದ ಎಲ್ಲಾ ವಿಪಕ್ಷ ನಾಯಕರನ್ನು ಆಹ್ವಾನಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
Published: 11th July 2023 01:09 PM | Last Updated: 11th July 2023 02:13 PM | A+A A-

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಇದೇ ತಿಂಗಳ ಜುಲೈ 17 ಮತ್ತು 18ರಂದು ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ವಿಪಕ್ಷ ನಾಯಕರ ಸಭೆ ನಡೆಯಲಿದ್ದು ಅದಕ್ಕೆ ಸಮಾನ ಮನಸ್ಕ ಉನ್ನತ ಮಟ್ಟದ ಎಲ್ಲಾ ವಿಪಕ್ಷ ನಾಯಕರನ್ನು ಆಹ್ವಾನಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಇಂದು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಜುಲೈ 17ರಂದು ಸಂಜೆ 6 ಗಂಟೆಗೆ ಸಭೆ ಆರಂಭವಾಗಲಿದೆ. ನಂತರ ಮುಖ್ಯಮಂತ್ರಿಗಳಿಂದ ಔತಣಕೂಡ ಏರ್ಪಡಲಿದೆ. ಮರುದಿನ ಜುಲೈ 18ರಂದು ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ ಎಂದು ತಿಳಿಸಿದರು.
ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ 2ನೇ ಸುತ್ತಿನ ಸಭೆ ನಡೆಯಲಿದ್ದು ಅದರಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಾಲ್ಗೊಳ್ಳುವ ಸುಳಿವನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ನೀಡಿದ್ದಾರೆ. ಮೊದಲ ಸುತ್ತಿನ ಸಭೆ ಕಳೆದ ತಿಂಗಳು ಪಾಟ್ನಾದಲ್ಲಿ ನಡೆದಿತ್ತು.
ಇದನ್ನೂ ಓದಿ: ಬೆಂಗಳೂರು: ವಿಪಕ್ಷ ಒಕ್ಕೂಟದ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭಾಗಿ ಸಾಧ್ಯತೆ!
ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಭಾರೀ ಸ್ಪರ್ಧೆಯೊಡ್ಡಲು ಪರ್ಯಾಯ ಶಕ್ತಿ ರಚಿಸಲು ವಿಪಕ್ಷಗಳೆಲ್ಲಾ ಒಗ್ಗೂಡಲು ಮುಂದೆ ಬಂದಿದ್ದು ಎಲ್ಲಾ ಪ್ರತಿಪಕ್ಷ ನಾಯಕರುಗಳು ತಮ್ಮ ಶಕ್ತಿ ಪ್ರದರ್ಶಿಸುವುದು, ಲೋಕಸಭೆ ಚುನಾವಣೆ 2024ರ ವೇಳೆಗೆ ತಂತ್ರಗಾರಿಕೆ ಹೆಣೆಯುವುದು ಉದ್ದೇಶವಾಗಿದೆ. ಸುಮಾರು 80 ಮಂದಿ ವಿರೋಧ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರುಗಳೊಂದಿಗೆ ಸಭೆ ನಡೆಸಿದ್ದರು.