ಕೇದಾರನಾಥ ದೇಗುಲದಲ್ಲಿ ಮೊಬೈಲ್ ಬಳಕೆ, ಛಾಯಾಗ್ರಹಣ, ವಿಡಿಯೋಗ್ರಫಿಗೆ ನಿಷೇಧ
ಕೇದಾರನಾಥ ದೇಗುಲದ ಆವರಣದಲ್ಲಿ ಭಕ್ತರು ಛಾಯಾಚಿತ್ರ ತೆಗೆಯುವುದು ಮತ್ತು ವಿಡಿಯೋ ಮಾಡುವುದನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ಮಹಿಳಾ ಬ್ಲಾಗರ್ ಒಬ್ಬರು ದೇವಸ್ಥಾನದ ಮುಂದೆ ತನ್ನ ಗೆಳೆಯನಿಗೆ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
Published: 17th July 2023 10:25 AM | Last Updated: 17th July 2023 01:20 PM | A+A A-

ಪ್ರಾತಿನಿಧಿಕ ಚಿತ್ರ
ಡೆಹ್ರಾಡೂನ್: ಇಲ್ಲಿನ ಕೇದಾರನಾಥ ದೇಗುಲದ ಆವರಣದಲ್ಲಿ ಭಕ್ತರು ಛಾಯಾಚಿತ್ರ ತೆಗೆಯುವುದು ಮತ್ತು ವಿಡಿಯೋ ಮಾಡುವುದನ್ನು ನಿಷೇಧಿಸಲಾಗಿದೆ.
ಇತ್ತೀಚೆಗೆ ಮಹಿಳಾ ಬ್ಲಾಗರ್ ಒಬ್ಬರು ದೇವಸ್ಥಾನದ ಮುಂದೆ ತನ್ನ ಗೆಳೆಯನಿಗೆ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ದೇವಾಲಯದ ಆವರಣದಲ್ಲಿ ವಿವಿಧೆಡೆ ಬೋರ್ಡ್‌ಗಳನ್ನು ಹಾಕಿದ್ದು, 'ಮೊಬೈಲ್ ಫೋನ್‌ಗಳೊಂದಿಗೆ ದೇವಾಲಯದ ಆವರಣವನ್ನು ಪ್ರವೇಶಿಸಬೇಡಿ; ದೇವಾಲಯದ ಒಳಗೆ ಯಾವುದೇ ರೀತಿಯ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನೀವು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುತ್ತೀರಿ' ಎಂದು ಬರೆಯಲಾಗಿದೆ.
ಇದನ್ನೂ ಓದಿ: ಕೇದಾರನಾಥ ಚಾರಣದಲ್ಲಿ 'ಕಳೆ' ತುಂಬಿದ ಸಿಗರೇಟ್ ಹೊಗೆ ಉಸಿರಾಡುವಂತೆ ಹೇಸರಗತ್ತೆಗೆ ಒತ್ತಾಯ; ವ್ಯಕ್ತಿ ಬಂಧನ
ಇದರೊಂದಿಗೆ, ದೇವಾಲಯಕ್ಕೆ ಬರುವ ಜನರು 'ಯೋಗ್ಯ ಬಟ್ಟೆಗಳನ್ನು' ಧರಿಸುವಂತೆ ಮತ್ತು ದೇವಾಲಯದ ಆವರಣದಲ್ಲಿ ಡೇರೆಗಳು ಅಥವಾ ಶಿಬಿರಗಳನ್ನು ಸ್ಥಾಪಿಸುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದೆ. ಆದೇಶವನ್ನು ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆದಿರುವ ಬೋರ್ಡ್‌ಗಳಲ್ಲಿ ತಿಳಿಸಲಾಗಿದೆ.
ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಮಾತನಾಡಿ, ಧಾರ್ಮಿಕ ಸ್ಥಳವು ನಂಬಿಕೆಯ ವ್ಯವಸ್ಥೆಯನ್ನು ಅನುಸರಿಸುತ್ತದೆ ಮತ್ತು ಭಕ್ತರು ಅದನ್ನು ಗೌರವಿಸಬೇಕು ಎಂದಿದ್ದಾರೆ.
ಬದರಿನಾಥ ಧಾಮದಿಂದ ಇನ್ನೂ ಯಾವುದೇ ದೂರುಗಳು ಬಂದಿಲ್ಲವಾದರೂ, ಅಂತಹ ಬೋರ್ಡ್‌ಗಳನ್ನು ಅಲ್ಲಿಯೂ ಅಳವಡಿಸಲಾಗುವುದು ಎಂದು ಅವರು ಹೇಳಿದರು.