ಪಶ್ಚಿಮ ಬಂಗಾಳ: ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರನ್ನು ಉಸಿರಾಟ ತೊಂದರೆಯಿಂದ ಶನಿವಾರ ಮಧ್ಯಾಹ್ನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
Published: 29th July 2023 07:16 PM | Last Updated: 29th July 2023 07:16 PM | A+A A-

ಬುದ್ಧದೇವ್ ಭಟ್ಟಾಚಾರ್ಯ
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರನ್ನು ಉಸಿರಾಟ ತೊಂದರೆಯಿಂದ ಶನಿವಾರ ಮಧ್ಯಾಹ್ನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಹಸಿರು ಕಾರಿಡಾರ್ ಮೂಲಕ ಅವರನ್ನು ಆಸ್ಪತ್ರೆಗೆ ಕರೆತಂದಿದ್ದು, ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2000 ರಿಂದ 2011 ರವರೆಗೆ ಮುಖ್ಯಮಂತ್ರಿಯಾಗಿದ್ದ ಭಟ್ಟಾಚಾರ್ಯ ಅವರು ಕೆಲವು ದಿನಗಳಿಂದ ಶ್ವಾಸಕೋಶದ ಸೋಂಕು ಮತ್ತಿತರ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಪರೀಕ್ಷಿಸುತ್ತಿದ್ದೇವೆ ಎಂದು ಅಧಿಕಾರಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಭಟ್ಟಾಚಾರ್ಯ ಅವರ ಆರೋಗ್ಯದ ಮೇಲೆ ನಿಗಾ ಇಡಲು ಹೃದ್ರೋಗ ತಜ್ಞರು ಮತ್ತು ಶ್ವಾಸಕೋಶ ತಜ್ಞರು ಸೇರಿದಂತೆ ಹಿರಿಯ ವೈದ್ಯರ ತಂಡವನ್ನು ರಚಿಸಲಾಗಿದೆ. ಅವರ ಪತ್ನಿ ಮೀರಾ ಭಟ್ಟಾಚಾರ್ಯ ಮತ್ತು ಪುತ್ರಿ ಸುಚೇತನಾ ಭಟ್ಟಾಚಾರ್ಯ ಇಬ್ಬರೂ ಆಸ್ಪತ್ರೆಯಲ್ಲಿದ್ದಾರೆ.
ಆರೋಗ್ಯದ ಕಾರಣದಿಂದ ಭಟ್ಟಾಟಾರ್ಯ ಅವರು ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕ ಜೀವನದಿಂದ ದೂರವಿದ್ದರು. 2015ರಲ್ಲಿ ಸಿಪಿಐ(ಎಂ)ನ ಪೊಲಿಟ್‌ಬ್ಯೂರೊ ಮತ್ತು ಕೇಂದ್ರ ಸಮಿತಿಯಿಂದ ಕೆಳಗಿಳಿದಿದ್ದ ಅವರು 2018ರಲ್ಲಿ ರಾಜ್ಯ ಕಾರ್ಯದರ್ಶಿ ಸದಸ್ಯತ್ವವನ್ನು ತ್ಯಜಿಸಿದ್ದರು.