ಜೈಪುರ: ಪ್ರತಿ ಮನೆಗೂ ತಿಂಗಳಿಗೆ 100 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ರಾಜಸ್ಥಾನ ಸರ್ಕಾರದ ನಿರ್ಧಾರವನ್ನು ಲೇವಡಿ ಮಾಡಿರುವ ವಿರೋಧ ಪಕ್ಷ ಬಿಜೆಪಿ ಗುರುವಾರ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭರವಸೆಗಳನ್ನು ಈಡೇರಿಸದೆ ಇಂತಹ ಘೋಷಣೆಗಳನ್ನು ಮಾಡುತ್ತಲೇ ಇದ್ದಾರೆ ಎಂದು ಆರೋಪಿಸಿದೆ.
ಈ ಹಿಂದೆ 100 ಯೂನಿಟ್‌ವರೆಗೆ ಬಳಕೆ ಮಾಡುವ ಮನೆಗಳಿಗೆ ಮಾತ್ರ ಉಚಿತ ವಿದ್ಯುತ್ ಸಿಗುತ್ತಿತ್ತು.
ಇದೀಗ ತಿಂಗಳಿನ ಒಟ್ಟು ಬಳಕೆಯನ್ನು ಲೆಕ್ಕಿಸದೆ ಎಲ್ಲಾ ಮನೆಗಳಿಗೆ ಮೊದಲ 100 ಯೂನಿಟ್ ವಿದ್ಯುತ್‌ಗೆ ಶುಲ್ಕವನ್ನು ಮನ್ನಾ ಮಾಡುವುದಾಗಿ ಅಶೋಕ್ ಗೆಹ್ಲೋಟ್ ಬುಧವಾರ ಘೋಷಿಸಿದ್ದರು.
ಬಿಜೆಪಿ ಶಾಸಕ ಮತ್ತು ಪಕ್ಷದ ವಕ್ತಾರ ರಾಮ್‌ಲಾಲ್ ಶರ್ಮಾ ಮಾತನಾಡಿ, ರಾಜ್ಯದ ಎಲ್ಲಾ ಮೂರು ಡಿಸ್ಕಾಂಗಳು ಭಾರಿ ಸಾಲದಲ್ಲಿವೆ ಮತ್ತು ಕಾಂಗ್ರೆಸ್ ಸರ್ಕಾರದ ಇತ್ತೀಚಿನ ಕೊಡುಗೆಯು ಅವುಗಳ ಸಂಕಟಗಳನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಒಂದು ಲಕ್ಷ ಕೋಟಿ ರೂಪಾಯಿಗೂ ಅಧಿಕವಾಗಿರುವ ಡಿಸ್ಕಾಂಗಳ ಸಾಲವನ್ನು ಸರ್ಕಾರ ಎಲ್ಲಿಂದ ಮರುಪಾವತಿ ಮಾಡುತ್ತದೆ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸುವರೇ?. ಇವತ್ತಲ್ಲದಿದ್ದರೆ ನಾಳೆ ಈ ಸಾಲ ರಾಜ್ಯದ ಜನತೆಯ ಮೇಲೆ ಹೊರೆಯಾಗಲಿದೆ. ಆದ್ದರಿಂದ ಯಾವುದೇ ಮುಖ್ಯಮಂತ್ರಿಗಳು ಇಂತಹ ಘೋಷಣೆಗಳನ್ನು ಮಾಡುವ ಬದಲು ರಾಜ್ಯವನ್ನು ಯಾವ ರೀತಿ ಪ್ರಗತಿಯತ್ತ ಕೊಂಡೊಯ್ಯಬೇಕು ಎಂದು ಗಂಭೀರವಾಗಿ ಚಿಂತಿಸಿದರೆ ಒಳಿತು ಎಂದು ಶರ್ಮಾ ಹೇಳಿದರು.
ಈ ಆರೋಪಗಳಿಗೆ ಉತ್ತರಿಸಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ, ಹಣದುಬ್ಬರದಿಂದ ಜನರಿಗೆ ಪರಿಹಾರವನ್ನು ಒದಗಿಸುವ ಗುರಿಯನ್ನು ಈ ಕ್ರಮವು ಹೊಂದಿದೆ. ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಹೆಚ್ಚಿನ ಹಣದುಬ್ಬರದಿಂದ ತತ್ತರಿಸುತ್ತಿರುವ ಜನರಿಗೆ ಈ ಪ್ರಕಟಣೆಯು ಖಂಡಿತವಾಗಿಯೂ ಪರಿಹಾರವನ್ನು ನೀಡುತ್ತದೆ ಎಂದು ಹೇಳಿದರು.
ಮತ್ತೊಂದೆಡೆ, ರಾಜಸ್ಥಾನ ಸರ್ಕಾರವು ಜನರಿಗೆ ಪರಿಹಾರ ನೀಡುವ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
Advertisement