ಗೋಹತ್ಯೆ ಕಾಯ್ದೆ: ಕೇವಲ ಮಾಂಸವನ್ನು ಹೊಂದುವುದು ಅಪರಾಧವಲ್ಲ ಎಂದ ಅಲಹಾಬಾದ್ ಹೈಕೋರ್ಟ್
ಮಾಂಸವನ್ನು ಹೊಂದುವುದು ಅಥವಾ ಸಾಗಿಸುವುದು, ಗೋಮಾಂಸ ಅಥವಾ ಗೋಮಾಂಸ ಉತ್ಪನ್ನಗಳ ಮಾರಾಟ ಅಥವಾ ಸಾಗಣೆಯನ್ನು ಗೋಹತ್ಯೆ ಕಾಯಿದೆಯಡಿಯಲ್ಲಿ ಶಿಕ್ಷಾರ್ಹವೆಂದು ಪರಿಗಣಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
Published: 02nd June 2023 09:25 PM | Last Updated: 03rd June 2023 05:15 PM | A+A A-

ಸಾಂದರ್ಭಿಕ ಚಿತ್ರ
ಲಖನೌ: ಮಾಂಸವನ್ನು ಹೊಂದುವುದು ಅಥವಾ ಸಾಗಿಸುವುದು, ಗೋಮಾಂಸ ಅಥವಾ ಗೋಮಾಂಸ ಉತ್ಪನ್ನಗಳ ಮಾರಾಟ ಅಥವಾ ಸಾಗಣೆಯನ್ನು ಗೋಹತ್ಯೆ ಕಾಯಿದೆಯಡಿಯಲ್ಲಿ ಶಿಕ್ಷಾರ್ಹವೆಂದು ಪರಿಗಣಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಪಿಲಿಭಿತ್‌ನ ಪುರನ್‌ಪುರ ಪ್ರದೇಶದ ಇಬ್ರಾನ್ ಅಲಿಯಾಸ್ ಶೇರು ಜಾಮೀನು ಅರ್ಜಿ ಕುರಿತಂತೆ ನ್ಯಾಯಮೂರ್ತಿ ವಿಕ್ರಮ್ ಡಿ ಚೌಹಾಣ್ ಈ ಆದೇಶ ನೀಡಿದ್ದಾರೆ. ಅಲ್ಲದೆ ವಶಪಡಿಸಿಕೊಂಡ ವಸ್ತು ಗೋಮಾಂಸ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಈತ ಪೇಂಟರ್ ಆಗಿದ್ದು, ದಾಳಿ ನಡೆಸಿದಾಗ ಮನೆಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಎಂದು ಅರ್ಜಿದಾರರ ಪರವಾಗಿ ತಿಳಿಸಲಾಗಿತ್ತು. ಅವರ ಮೇಲಿನ ಆರೋಪಕ್ಕೆ ಬೇರೆ ಯಾವುದೇ ಪುರಾವೆಗಳಿಲ್ಲ. ಈ ಪ್ರಕರಣದಲ್ಲಿ ಆತನನ್ನು ತಪ್ಪಾಗಿ ಸಿಲುಕಿಸಲಾಗಿದೆ. ಗೋಮಾಂಸ ಅಥವಾ ಅದರ ಉತ್ಪನ್ನಗಳು ಅಥವಾ ಅದರ ಸಾಗಣೆಗೆ ಯಾವುದೇ ಸಂಬಂಧವಿಲ್ಲ. ಇದನ್ನು ವಿರೋಧಿಸಿದ ಸರ್ಕಾರಿ ವಕೀಲರು, ಪತ್ತೆಯಾದ ಮಾಂಸವು ಗೋವಂಶಕ್ಕೆ ಸೇರಿದ್ದು, ಅರ್ಜಿದಾರರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ ಅವರು ಜಾಮೀನು ಪಡೆಯಲು ಅರ್ಹರಲ್ಲ ಎಂದು ವಾದಿಸಿದ್ದರು.
ಇದನ್ನೂ ಓದಿ: ಉತ್ತರ ಪ್ರದೇಶ: ಗೋಹತ್ಯೆ ಆರೋಪದಡಿ ವ್ಯಕ್ತಿಗೆ ಚಿತ್ರಹಿಂಸೆ ನೀಡಿದ 5 ಪೊಲೀಸರು ಸೇರಿದಂತೆ 7 ಮಂದಿ ವಿರುದ್ಧ ಪ್ರಕರಣ
ಸತ್ಯ ಮತ್ತು ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ಅರ್ಜಿದಾರರನ್ನು ಷರತ್ತುಗಳೊಂದಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿದೆ. ಗೋಹತ್ಯೆ ಕಾಯ್ದೆಯಡಿ ಪಿಲಿಭಿತ್‌ನ ಪುರನ್‌ಪುರ ಪೊಲೀಸ್ ಠಾಣೆಯಲ್ಲಿ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕೆಳ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದಾದ ಬಳಿಕ ಅರ್ಜಿದಾರರು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಇಬ್ರಾನ್ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಅಂಗೀಕರಿಸಿದೆ.