ರೈಲು ಅಪಘಾತ ದೊಡ್ಡ ದುರಂತ: ರಕ್ಷಣೆಗೆ ರಾತ್ರೋರಾತ್ರಿ ಶ್ರಮಿಸಿದ ಸ್ಥಳೀಯರು, ರಕ್ಷಣಾ ಪಡೆಗಳಿಗೆ ಧನ್ಯವಾದ ಎಂದ ಒಡಿಶಾ ಸಿಎಂ
ರೈಲು ಅಪಘಾತ ದೊಡ್ಡ ದುರಂತವಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ರಾತ್ರೋರಾತ್ರಿ ಶ್ರಮಿಸಿದ ಸ್ಥಳೀಯರು, ರಕ್ಷಣಾ ಪಡೆಗಳು ಹಾಗೂ ಇತರರಿಗೆ ಧನ್ಯವಾದಗಳನ್ನು ಹೇಳುತ್ತೇನೆಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶನಿವಾರ ಹೇಳಿದ್ದಾರೆ.
Published: 03rd June 2023 11:40 AM | Last Updated: 03rd June 2023 05:46 PM | A+A A-

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್
ಬಾಲಸೋರ್: ರೈಲು ಅಪಘಾತ ದೊಡ್ಡ ದುರಂತವಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ರಾತ್ರೋರಾತ್ರಿ ಶ್ರಮಿಸಿದ ಸ್ಥಳೀಯರು, ರಕ್ಷಣಾ ಪಡೆಗಳು ಹಾಗೂ ಇತರರಿಗೆ ಧನ್ಯವಾದಗಳನ್ನು ಹೇಳುತ್ತೇನೆಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶನಿವಾರ ಹೇಳಿದ್ದಾರೆ.
ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ನವೀನ್ ಪಟ್ನಾಯಕ್ ಅವರು, ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲು ಅಪಘಾತ ದೊಡ್ಡ ದುರಂತ. ಸ್ಥಳದಲ್ಲಿ ಜನರ ರಕ್ಷಣೆಗೆ ರಾತ್ರೋರಾತ್ರಿ ಶ್ರಮಿಸಿದ ಸ್ಥಳೀಯ ತಂಡಗಳು, ಸ್ಥಳೀಯ ಜನರು, ಇತರರಿಗೆ ಧನ್ಯವಾದಗಳ ಹೇಳಲು ಬಯಸುತ್ತೇನೆ. ರೈಲ್ವೇ ಸುರಕ್ಷತೆಗೆ ಯಾವಾಗಲೂ ಆದ್ಯತೆ ನೀಡಬೇಕು. ಗಾಯಾಳುಗಳನ್ನು ಬಾಲಸೋರ್ ಮತ್ತು ಕಟಕ್‌ನ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಒಡಿಶಾದಲ್ಲಿ ಭೀಕರ ರೈಲು ಅಪಘಾತ: ಭಾರತೀಯ ರೈಲ್ವೆ ಇತಿಹಾಸದಲ್ಲಿನ ಮಾರಣಾಂತಿಕ ಅಪಘಾತಗಳಲ್ಲೊಂದು..
ಈ ನಡುವೆ ರಕ್ಷಣಾ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿರುವ ಐಜಿ ನರೇಂದ್ರ ಸಿಂಗ್ ಬುಂದೇಲಾ ಅವರು, ಅಪಘಾತದಲ್ಲಿ 17 ಬೋಗಿಗಳು ಹಳಿ ತಪ್ಪಿದ್ದು, ಪೂರ್ಣ ಪ್ರಮಾಣದಲ್ಲಿ ನಾಶಗೊಂಡಿದೆ. ಎನ್ಆರ್'ಡಿಆರ್'ಎಫ್ ಪಡೆಯ 9 ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ದುರ್ಘಟನೆಗೆ ಕಾರಣಗಳು ತನಿಖೆ ನಂತರವೇ ತಿಳಿದು ಬರಲಿದೆ ಎಂದು ಹೇಳಿದ್ದಾರೆ.
ಸ್ಥಳದಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ರಾಜ್ಯ ಸರ್ಕಾರವು 238 ಮಂದಿ ಸಾವನ್ನಪ್ಪಿದ್ದಾರೆ ಮತ್ತು 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಘೋಷಿಸಿದೆ. ಸಂಜೆ ವೇಳೆ ಕಾರ್ಯಾಚರಣೆ ಪೂರ್ಣಗೊಳ್ಳುವ ವಿಶ್ವಾಸವಿದೆ. ಒಡಿಶಾದಿಂದ ಏಳು ಮತ್ತು ಪಶ್ಚಿಮ ಬಂಗಾಳದಿಂದ ಎರಡು ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.