ಲಖನೌ: ಕಾರಿನ ಮೇಲೆ ಜಾಹೀರಾತು ಫಲಕ ಬಿದ್ದು ಮಹಿಳೆ, ಆಕೆಯ ಪುತ್ರಿ ದುರ್ಮರಣ
ಕಾರಿನ ಮೇಲೆ ಜಾಹೀರಾತು ಫಲಕ ಬಿದ್ದಿದ್ದರಿಂದ ಮಹಿಳೆ ಹಾಗೂ ಆಕೆಯ ಪುತ್ರಿ ಮೃತಪಟ್ಟು, ಚಾಲಕ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಖನೌನ ಏಕಾನಾ ಸ್ಟೇಡಿಯಂ ಹೊರಗಡೆ ಸೋಮವಾರ ನಡೆದಿದೆ.
Published: 05th June 2023 11:13 PM | Last Updated: 05th June 2023 11:13 PM | A+A A-

ಸಾಂದರ್ಭಿಕ ಚಿತ್ರ
ಲಖನೌ: ಕಾರಿನ ಮೇಲೆ ಜಾಹೀರಾತು ಫಲಕ ಬಿದ್ದಿದ್ದರಿಂದ ಮಹಿಳೆ ಹಾಗೂ ಆಕೆಯ ಪುತ್ರಿ ಮೃತಪಟ್ಟು, ಚಾಲಕ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಖನೌನ ಏಕಾನಾ ಸ್ಟೇಡಿಯಂ ಹೊರಗಡೆ ಸೋಮವಾರ ನಡೆದಿದೆ. ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಗಾಜಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾ ನಗರ ಕಾಲೋನಿ ನಿವಾಸಿಗಳಾದ ಪ್ರೀತಿ ಜಗ್ಗಿ (38) ಮತ್ತು ಅವರ ಮಗಳು ಏಂಜಲ್ (15) ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ವಾಹನದ ಮೇಲೆ ಜಾಹೀರಾತು ಫಲಕ ಬಿದ್ದಿದೆ ಎಂದು ಗೋಸೈಗಂಜ್ ಸಹಾಯಕ ಪೊಲೀಸ್ ಆಯುಕ್ತ (ಎಎಸ್‌ಪಿ) ಅಮಿತ್ ಕುಮಾವತ್ ತಿಳಿಸಿದ್ದಾರೆ.
ತಾಯಿ-ಮಗಳು ಕಾರು ಚಾಲಕ ಸರ್ತಾಜ್ (28) ಅವರೊಂದಿಗೆ ಮಾಲ್‌ಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಎಸ್‌ಎಚ್‌ಒ ಅತುಲ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ. ಕ್ರೀಡಾಂಗಣದ ಗೇಟ್ ನಂಬರ್ ಎರಡರ ಮುಂಭಾಗದಲ್ಲಿದ್ದ ಜಾಹೀರಾತು ಫಲಕ ಅವರ ವಾಹನದ ಮೇಲೆ ಬಿದ್ದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.
ಸರ್ತಾಜ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.