ಮೇಲೆ ಕುಸ್ತಿ- ಒಳಗೆ ದೋಸ್ತಿ: ದೀದಿಯ 'ಮಾವು' ರಾಜಕಾರಣ; ನರೇಂದ್ರ ಮೋದಿಗೆ ಮಾವಿನ ಹಣ್ಣಿನ ಗಿಫ್ಟ್!
ಪ್ರಧಾನಿ ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ಅವರ ಸಂಬಂಧ ಎಣ್ಣೆ-ಸೀಗೇಕಾಯಿಯಂತೆ ಎನ್ನುವುದನ್ನು ಅವರ ನಡುವಿನ ರಾಜಕೀಯ ಹಾಗೂ ಮಾತಿನ ಸಂಘರ್ಷಗಳು ಪದೇ ಪದೇ ಸಾಬೀತುಪಡಿಸುತ್ತಿರುತ್ತದೆ.
Published: 07th June 2023 01:23 PM | Last Updated: 07th June 2023 07:44 PM | A+A A-

ಸಾಂದರ್ಭಿಕ ಚಿತ್ರ
ಕೊಲ್ಕೋತಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ಅವರ ಸಂಬಂಧ ಎಣ್ಣೆ-ಸೀಗೇಕಾಯಿಯಂತೆ ಎನ್ನುವುದನ್ನು ಅವರ ನಡುವಿನ ರಾಜಕೀಯ ಹಾಗೂ ಮಾತಿನ ಸಂಘರ್ಷಗಳು ಪದೇ ಪದೇ ಸಾಬೀತುಪಡಿಸುತ್ತಿರುತ್ತದೆ.
ಆದರೆ ರಾಜಕೀಯದ ಕಿತ್ತಾಟದ ಹೊರತಾಗಿಯೂ, ಕೆಲವು ಉನ್ನತ ಮಟ್ಟದ ನಾಯಕರು ಒಂದು ಪದ್ಧತಿಯನ್ನು ನಡೆಸಿಕೊಂಡೇ ಬರುತ್ತಿರುತ್ತಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನೇ ತೆಗೆದುಕೊಳ್ಳಿ. ಪ್ರದಾನಿ ನರೇಂದ್ರ ಮೋದಿ ಅವರ ವಿರುದ್ಧ ಸದಾ ಬುಸುಗುಡುವ ದೀದಿ, ಪ್ರತಿ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಹಿಯಾದ ಮಾವಿನ ಹಣ್ಣಿನ ಗಿಫ್ಟ್ ಕಳುಹಿಸುವುದಿ ಸಂಪ್ರದಾಯ ಮಾಡಿಕೊಂಡಿದ್ದಾರೆ.
ವಿಶೇಷ ತಳಿಯ ಹಿಮ್‌ಸಾಗರ್, ಫಾಜ್ಲಿ ಮತ್ತು ಲಕ್ಷ್ಮಣಭೋಗ್‌ನಂತಹ ಮಾವಿನ ಹಣ್ಣಿನ 4 ಕೆಜಿ ಬಾಕ್ಸ್ ಗಳನ್ನು 7, ಲೋಕ್ ಕಲ್ಯಾಣ್ ಮಾರ್ಗ್ ನಿವಾಸಕ್ಕೆ ಇನ್ನೆರಡು ದಿನಗಳಲ್ಲಿ ಕಳುಹಿಸಲಿದ್ದಾರೆ.
ಮಮತಾ ಅವರಿಂದ ಇದೇ ರೀತಿಯ ಉಡುಗೊರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಮನೆ ಬಾಗಿಲಿಗೆ ತಲುಪುತ್ತದೆ.
ಪ್ರತಿ ವರ್ಷ ಮೋದಿಗೆ ದೀದಿ ಗಿಫ್ಟ್ ಕಳುಹಿಸುವುದು ಮಾಮೂಲಿ, ಆದರೆ ಈ ವರ್ಷ ರೈಲು ದುರಂತದಲ್ಲಿ 288 ಮಂದಿ ಸಾವನ್ನಪ್ಪಿದ್ದಾರೆ, ಈ ಪ್ರಕರಣವನ್ನು ಸಿಬಿಐ ಗೆ ವಹಿಸಿದ ಸಂಬಂಧ, ದೀದಿ ಗಿಫ್ಟ್ ಕಳುಹಿಸುತ್ತಾರೆಯೇ ಎಂಬ ಅನುಮಾನ ಮೂಡಿತ್ತು.
ರೈಲ್ವೇ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಮಮತಾ ಆರೋಪಿಸಿದರು. ಮಮತಾ, ಕೇಂದ್ರ ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ಘರ್ಷಣೆ ತಡೆ ಸಾಧನವನ್ನು ಅಳವಡಿಸಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು ಎಂದಿದ್ದಾರೆ. ರಾಷ್ಟ್ರೀಯ ಫಲವು ರಾಜ್ಯ-ಕೇಂದ್ರ ಸಂಬಂಧದಲ್ಲಿ ಸಿಹಿಯನ್ನು ನೀಡಬಹುದೇ ಎಂದು ಈಗ ನೋಡೋಣ, ಎಂದು ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ವ್ಯಂಗ್ಯವಾಡಿದ್ದಾರೆ.
ತನ್ನ ಮಾವಿನ ರಾಜತಾಂತ್ರಿಕತೆಗೆ ಹೆಸರಾದ ಇನ್ನೊಬ್ಬ ನಾಯಕಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ. ಎರಡು ವರ್ಷಗಳ ಹಿಂದೆ 2,600 ಕೆಜಿ ಹಣ್ಣನ್ನು ಮೋದಿ, ಮಮತಾ ಮತ್ತು ಇತರರಿಗೆ ಉಡುಗೊರೆಯಾಗಿ ಕಳುಹಿಸಿದ್ದರು. ಸರಾಸರಿ 26 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಲ್ಲಿ, ಬಂಗಾಳವು ದೇಶಾದ್ಯಂತ ಮಾವಿನ ಇಳುವರಿಯಲ್ಲಿ ಆರನೇ ಸ್ಥಾನದಲ್ಲಿದೆ.