13ರ ಬಾಲಕಿ ಮೇಲೆ ಅತ್ಯಾಚಾರ, ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಪೋಸ್ಟ್: ಭೋಜ್‌ಪುರಿ ಗಾಯಕನ ಬಂಧನ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಚಿತ್ರಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ 21 ವರ್ಷದ ಭೋಜ್‌ಪುರಿ ಗಾಯಕನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
Published: 09th June 2023 12:35 PM | Last Updated: 09th June 2023 12:35 PM | A+A A-

ಸಾಂದರ್ಭಿಕ ಚಿತ್ರ
ಗುರುಗ್ರಾಮ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಚಿತ್ರಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ 21 ವರ್ಷದ ಭೋಜ್‌ಪುರಿ ಗಾಯಕನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿಯನ್ನು ಬಿಹಾರ ಮೂಲದ ಅಭಿಷೇಕ್ (21) ಎಂದು ಗುರುತಿಸಲಾಗಿದ್ದು, ಆತ ಭೋಜ್‌ಪುರಿ ಗಾಯಕ ಬಾಬುಲ್ ಬಿಹಾರಿ ಎಂದೂ ಖ್ಯಾತನಾಗಿದ್ದ ಎಂದು ಹೇಳಲಾಗಿದೆ. ಆತ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 27,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಣಿಪುರ: ಬೈಕ್‌ನಲ್ಲಿ ಬಂದು ಶಾಸಕರ ನಿವಾಸದ ಮೇಲೆ ಬಾಂಬ್ ಎಸೆದ ಇಬ್ಬರು ದುಷ್ಕರ್ಮಿಗಳು
ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯು ಎರಡು ವರ್ಷಗಳ ಹಿಂದೆ ರಾಜೀವ್ ನಗರ ಪ್ರದೇಶದಲ್ಲಿ ವಾಸವಾಗಿದ್ದ 13 ವರ್ಷದ ಬಾಲಕಿಗೆ ಆಮಿಷ ಒಡ್ಡಿದ್ದ. ಆಕೆಯೊಂದಿಗೆ ಸ್ನೇಹ ಬೆಳೆಸಿ ಬಳಿಕ ಆಕೆಯನ್ನು ಹೋಟೆಲ್ ರೂಮಿಗೆ ಕರೆದೊಯ್ದು ಅತ್ಯಾಚಾರವೆಸಗಿ ಆಕೆಯ ಚಿತ್ರಗಳನ್ನು ತೆಗೆದಿದ್ದಾನೆ. ಘಟನೆಯ ನಂತರ ಅಪ್ರಾಪ್ತ ಬಾಲಕಿ ಆರೋಪಿಯಿಂದ ದೂರ ಉಳಿದಿದ್ದು, ಆತನ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಆರೋಪಿಯು ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯ ಚಿತ್ರಗಳನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ಚಿತ್ರಗಳನ್ನು ನೋಡಿದ ನಂತರ, ಸಂತ್ರಸ್ತೆಯ ಕುಟುಂಬದವರು ಬಾಲಕಿಯನ್ನು ಪ್ರಶ್ನಿಸಿದ್ದು, ನಂತರ ಆಕೆ ತನ್ನೊಂದಿಗಾದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಕುಟುಂಬದವರು ಬುಧವಾರ ಆಕೆಯನ್ನು ಪೊಲೀಸರ ಬಳಿ ಕರೆದೊಯ್ದಿದ್ದಾರೆ. ಸಂತ್ರಸ್ತೆಗೆ ಕೌನ್ಸಿಲಿಂಗ್ ಮಾಡಿದ ನಂತರ, ಆರೋಪಿಯ ವಿರುದ್ಧ ಸೆಕ್ಟರ್ 14 ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿಕೊಂಡು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ಸುಭಾಷ್ ಬೊಕೆನ್ ತಿಳಿಸಿದ್ದಾರೆ.
ಇದನ್ನೂ ಓದಿ: 'ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ': ಕೆನಡಾ ವಿರುದ್ಧ ಭಾರತ ತೀವ್ರ ಆಕ್ರೋಶ
"ಆರೋಪಿಯನ್ನು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇಂದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.