ಕಾಶ್ಮೀರದಲ್ಲಿ ಅಗ್ನಿಶಾಮಕ ನೇಮಕಾತಿಯಲ್ಲಿ ಅಕ್ರಮ: ಯುವಕರಿಂದ ಪ್ರತಿಭಟನೆ
ಜಮ್ಮು ಮತ್ತು ಕಾಶ್ಮೀರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ನೂರಾರು ಯುವಕರು ಶನಿವಾರ ಪ್ರತಿಭಟನೆ ನಡೆಸಿದರು.
Published: 10th June 2023 04:58 PM | Last Updated: 10th June 2023 05:08 PM | A+A A-

ಯುವಕರನ್ನು ವಶಕ್ಕೆ ಪಡೆದ ಪೊಲೀಸರು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ನೂರಾರು ಯುವಕರು ಶನಿವಾರ ಪ್ರತಿಭಟನೆ ನಡೆಸಿದರು.
ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಸಮಿತಿಯ ವರದಿಯನ್ನು ಅಧಿಕಾರಿಗಳು ಬಹಿರಂಗಗೊಳಿಸಬೇಕು ಎಂದು ಯುವಕರು ಆಗ್ರಹಿಸಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಮತ್ತು ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಹಸ್ತಾಂತರಿಸಬೇಕೆಂದು ಒತ್ತಾಯಿಸುತ್ತಿವೆ.
ಪ್ರತಿಭಟನಾಕಾರರಲ್ಲಿ ಒಬ್ಬರಾದ ಏಜಾಜ್ ಅಹ್ಮದ್ ಮಾತನಾಡಿ, ಆರು ತಿಂಗಳ ನಂತರವೂ ಜಮ್ಮು ಮತ್ತು ಕಾಶ್ಮೀರ ಆಡಳಿತವು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ) ಆರ್ ಕೆ ಗೋಯಲ್ ನೇತೃತ್ವದ ಮೂವರು ಸದಸ್ಯರ ಸಮಿತಿಯ ವರದಿಯನ್ನು ಬಹಿರಂಗಗೊಳಿಸದಿರುವುದು ದುರದೃಷ್ಟಕರ ಎಂದಿದ್ದಾರೆ.
ಇದನ್ನು ಓದಿ: 2016 ರಲ್ಲಿ ಪೆಲೆಟ್ ಗಳಿಂದ ದೃಷ್ಟಿ ಕಳೆದುಕೊಂಡಿದ್ದ ಶೋಪಿಯಾನ್ ಯುವತಿ 12 ನೇ ತರಗತಿಯಲ್ಲಿ ಉತ್ತೀರ್ಣ
ಅಗ್ನಿಶಾಮಕ ನೇಮಕಾತಿಯಲ್ಲಿ ಅಕ್ರಮ ಕುರಿತು ತನಿಖೆ ನಡೆಸಲು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಮಿತಿ ರಚಿಸಲಾಗಿತ್ತು.
"ನಮ್ಮನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಪಟ್ಟಿಯಿಂದ ಹೊರಹಾಕಲಾಗಿದೆ, ವರದಿಯನ್ನು ಸಾರ್ವಜನಿಕಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ಅಹ್ಮದ್ ಹೇಳಿದ್ದಾರೆ.
"ವರದಿಯನ್ನು ಸಾರ್ವಜನಿಕಗೊಳಿಸಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ? ತಪ್ಪಿತಸ್ಥರನ್ನು ಶಿಕ್ಷಿಸಬೇಕು ಮತ್ತು ನೇಮಕಾತಿಯನ್ನು ರದ್ದುಗೊಳಿಸಬೇಕು" ಎಂದು ಅಹ್ಮದ್ ಒತ್ತಾಯಿಸಿದ್ದಾರೆ.
ಸುಮಾರು 60,000 ಉದ್ಯೋಗ ಆಕಾಂಕ್ಷಿಗಳು 870 ಅಗ್ನಿಶಾಮಕ ಸಿಬ್ಬಂದಿ ಮತ್ತು ಅಗ್ನಿಶಾಮಕ ಚಾಲಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು.