ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ 8 ದಿನ ಇಡಿ ವಶಕ್ಕೆ, ಮುಂದಿನ ವಾರ ಸಹೋದರನ ವಿಚಾರಣೆ

ಬಂಧಿತ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರ ಸಹೋದರ ಆರ್‌ವಿ ಅಶೋಕ್ ಕುಮಾರ್ ಹಾಗೂ ಅವರ ಆಪ್ತ ಸಹಾಯಕ ಬಿ ಷಣ್ಮುಗಂ ಮತ್ತು ಇತರರನ್ನು ಮುಂದಿನ ವಾರ ವಿಚಾರಣೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ...
ಸೆಂಥಿಲ್ ಬಾಲಾಜಿ ಆರೋಗ್ಯ ವಿಚಾರಿಸಿದ ತಮಿಳುನಾಡು ಸಿಎಂ ಸ್ಟಾಲಿನ್
ಸೆಂಥಿಲ್ ಬಾಲಾಜಿ ಆರೋಗ್ಯ ವಿಚಾರಿಸಿದ ತಮಿಳುನಾಡು ಸಿಎಂ ಸ್ಟಾಲಿನ್

ಚೆನ್ನೈ: ಜೂನ್ 14 ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಬಂಧನಕ್ಕೊಳಗಾಗಿರುವ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ಚೆನ್ನೈನ ಸ್ಥಳೀಯ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ 8 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಶುಕ್ರವಾರ ಆದೇಶ ಹೊರಡಿಸಿದೆ.

ಪ್ರಸ್ತುತ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಸಚಿವರನ್ನು ಆಸ್ಪತ್ರೆಯಿಂದ ಸ್ಥಳಾಂತರಿಸುವಂತಿಲ್ಲ ಎಂದು ನ್ಯಾಯಾಲಯ ಇಡಿಗೆ ಸ್ಪಷ್ಟಪಡಿಸಿದೆ ಎಂದು ಬಾಲಾಜಿ ಪರ ವಕೀಲ ಎ ಸರವಣನ್ ಅವರು ತಿಳಿಸಿದ್ದಾರೆ.

ಆರೋಪಿ ಬಾಲಾಜಿ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಈ ಮಧ್ಯೆ, ಸಚಿವ ಸೆಂಥಿಲ್ ಬಾಲಾಜಿ ಅವರ ಸಹೋದರ ಆರ್‌ವಿ ಅಶೋಕ್ ಕುಮಾರ್ ಹಾಗೂ ಅವರ ಆಪ್ತ ಸಹಾಯಕ ಬಿ ಷಣ್ಮುಗಂ ಮತ್ತು ಇತರರನ್ನು ಮುಂದಿನ ವಾರ ವಿಚಾರಣೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಈ ಇಬ್ಬರು ಹಾಗೂ ಇತರ ಆರೋಪಿಗಳು ಮತ್ತು ಸಚಿವರಿಗೆ ಸಂಬಂಧಿಸಿದ ಆಪಾದಿತ 'ಬೇನಾಮಿ' ಭೂ ವ್ಯವಹಾರದಲ್ಲಿ ನಂಟು ಹೊಂದಿರುವ ಮಹಿಳೆಗೆ ಇಡಿ ಸಮನ್ಸ್ ನೀಡಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅವರ ಹೇಳಿಕೆ ದಾಖಲಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ವಾರ ಬೇರೆ ಬೇರೆ ದಿನಾಂಕಗಳಲ್ಲಿ ಚೆನ್ನೈನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

2011 ರಿಂದ 2016ರ ಅವಧಿಯಲ್ಲಿ ಸಾರಿಗೆ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಉದ್ಯೋಗಕ್ಕಾಗಿ ಲಂಚ ಪಡೆದ ಹಗರಣಕ್ಕೆ ಸಂಬಂಧಿಸಿದಂತೆ ಸೆಂಥಿಲ್‌ ಬಾಲಾಜಿ ಅವರನ್ನು ಇಡಿ ಬಂಧಿಸಿದೆ. ಈ ಅವಧಿಯಲ್ಲಿ ತಮಿಳುನಾಡಿನಲ್ಲಿ ಇದ್ದ ಎಐಎಡಿಎಂಕೆಯ ಜಯಲಲಿತಾ ನೇತೃತ್ವದ ಸರ್ಕಾರದಲ್ಲಿ ಸೆಂಥಿಲ್‌ ಬಾಲಾಜಿ ಸಾರಿಗೆ ಸಚಿವರಾಗಿದ್ದರು. ಸದ್ಯ ಅವರು ಎಂಕೆ ಸ್ಟಾಲಿನ್‌ ಸಂಪುಟದಲ್ಲಿ ವಿದ್ಯುತ್‌ ಮತ್ತು ಅಬಕಾರಿ ಖಾತೆಗಳನ್ನು ನಿರ್ವಹಿಸುತ್ತಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com