ದಾಂಪತ್ಯದ್ರೋಹ ಪ್ರಕರಣ: ಸಹೋದರರ ಮಧ್ಯೆ 'ಅಗ್ನಿಪರೀಕ್ಷೆ', ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು

ತೆಲಂಗಾಣ ರಾಜ್ಯದ ಮುಳುಗು ಜಿಲ್ಲೆಯಲ್ಲಿ ನಡೆದ ಅಪರೂಪದ ಪ್ರಕರಣ ಇದು. ಜೆ ಗಂಗಾಧರ್ ಎಂಬಾತ ತನ್ನ ಹಿರಿಯ ಸೋದರ ನಾಗಯ್ಯನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಅಗ್ನಿಪರೀಕ್ಷೆಯಲ್ಲಿ ಸೋತ ಅಣ್ಣ ತನಗೆ ಹಣ ನೀಡದೆ ಮೋಸ ಮಾಡುತ್ತಿದ್ದಾನೆ ಎಂದು ದೂರು ನೀಡಿದ್ದಾರೆ. 
ಬೆಂಕಿಯ ಕೆಂಡದಿಂದ ಕಬ್ಬಿಣದ ರಾಡ್ ತೆಗೆಯುತ್ತಿರುವುದು
ಬೆಂಕಿಯ ಕೆಂಡದಿಂದ ಕಬ್ಬಿಣದ ರಾಡ್ ತೆಗೆಯುತ್ತಿರುವುದು

ಮುಳುಗು: ತೆಲಂಗಾಣ ರಾಜ್ಯದ ಮುಳುಗು ಜಿಲ್ಲೆಯಲ್ಲಿ ನಡೆದ ಅಪರೂಪದ ಪ್ರಕರಣ ಇದು. ಜೆ ಗಂಗಾಧರ್ ಎಂಬಾತ ತನ್ನ ಹಿರಿಯ ಸೋದರ ನಾಗಯ್ಯನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಅಗ್ನಿಪರೀಕ್ಷೆಯಲ್ಲಿ ಸೋತ ಅಣ್ಣ ತನಗೆ ಹಣ ನೀಡದೆ ಮೋಸ ಮಾಡುತ್ತಿದ್ದಾನೆ ಎಂದು ದೂರು ನೀಡಿದ್ದಾರೆ. ದಾಂಪತ್ಯ ದ್ರೋಹ ಪ್ರಕರಣದಲ್ಲಿ ಪಂಚಾಯತ್ ನಾಗಯ್ಯ ತನ್ನ ಸೋದರ ಗಂಗಾಧರ್ ಗೆ ಹಣ ನೀಡಬೇಕೆಂದು ಷರತ್ತು ಹಾಕಿತ್ತು.

ನಡೆದ ಪ್ರಕರಣವೇನು?: ನಾಗಯ್ಯ ತನ್ನ ಪತ್ನಿ ಮತ್ತು ಸೋದರ ಗಂಗಾಧರ್ ಮಧ್ಯೆ ಅಕ್ರಮ ಸಂಬಂಧವಿದೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಇದಕ್ಕೆ ಪರಿಹಾರ ನೀಡಬೇಕು ಎಂದು ನಾಗಯ್ಯ ಮುಳುಗು ಜಿಲ್ಲೆಯ ಬಂಜಾರುಪಳ್ಳಿ ಗ್ರಾಮ ಪಂಚಾಯತ್ ಮೊರೆ ಹೋಗಿದ್ದರು. ಗ್ರಾಮ ಪಂಚಾಯತ್ ಮುಖ್ಯಸ್ಥರು ಗಂಗಾಧರ್ ಮತ್ತು ನಾಗಯ್ಯನನ್ನು ಕರೆದು ಎಷ್ಟೇ ರಾಜಿ ಸಂಧಾನ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. 

ಹಾಗಾದರೆ ಇಬ್ಬರೂ ತಮ್ಮ ಸಮಗ್ರತೆ, ಸತ್ಯವನ್ನು ಸಾಬೀತುಪಡಿಸಲು ಉರಿಯುತ್ತಿರುವ ಬೆಂಕಿಯಿಂದ ಕಬ್ಬಿಣದ ಸಲಾಕೆಯನ್ನು ಹೊರತೆಗೆಯಬೇಕೆಂದು ಗ್ರಾಮ ಪಂಚಾಯತ್ ಮುಖ್ಯಸ್ಥರು ತಾಕೀತು ಮಾಡಿದರು. ಈ ಅಗ್ನಿಪರೀಕ್ಷೆಯಲ್ಲಿ ಸೋತವರು 4 ಲಕ್ಷ ರೂಪಾಯಿ ಜಯಶಾಲಿಯಾದವನಿಗೆ ಕೊಡಬೇಕೆಂದರು.

4 ದಿನಗಳ ಹಿಂದೆ ಅಗ್ನಿಪರೀಕ್ಷೆ ನಡೆಯಿತು. ಗ್ರಾಮಸ್ಥರು ಅಣ್ಣ-ತಮ್ಮನ ಅಗ್ನಿಪರೀಕ್ಷೆ ಸವಾಲನ್ನು ಕುತೂಹಲದಿಂದ ನೋಡುತ್ತಿದ್ದರು. ತಮ್ಮ ಗಂಗಾಧರ್ ಕೊತಕೊತ ಬೆಂಕಿಯ ಕೆಂಡದಲ್ಲಿದ್ದ ಕಬ್ಬಿಣದ ಸಲಾಕೆಯನ್ನು ತೆಗೆದರು. ಸಣ್ಣಪುಟ್ಟ ಗಾಯಗಳಾದವು. ಅದೃಷ್ಟವಶಾತ್ ಪ್ರಾಣಾಪಾಯಗಳಿಂದ ಪಾರಾದರು. ಆದರೆ ನಾಗಯ್ಯ ಬೆಂಕಿಗೆ ಕೈಹಾಕಲು ಸುತಾರಂ ಒಪ್ಪಲಿಲ್ಲ. ಪಂದ್ಯದಲ್ಲಿ ಸೋತರೂ ತಮ್ಮನಿಗೆ 4 ಲಕ್ಷ ರೂಪಾಯಿ ಕೊಡಲಿಲ್ಲ. 

ಆಗ ತಮ್ಮ ಗಂಗಾಧರ್ ಪೊಲೀಸ್ ಠಾಣೆ ಮೆಟ್ಟಿಲೇರಿ ಅಣ್ಣ ಹಣ ಕೊಡುತ್ತಿಲ್ಲ ಎಂದು ದೂರು ನೀಡಿದರು. ಊರಿನ ಗ್ರಾಮಸ್ಥರು ಮಾನನಷ್ಟ ಮೊಕದ್ದಮೆ ಮತ್ತು ಬೆಂಕಿಗೆ ಕೈಹಾಕಿ ಆದ ಗಾಯಕ್ಕೆ ಪರಿಹಾರವಾಗಿ 11 ಲಕ್ಷ ರೂಪಾಯಿ ಕೇಳು ಎಂದು ಹೇಳಿಕೊಟ್ಟರು.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿದ ಮುಳುಗು ಸಬ್ ಇನ್ಸ್ ಪೆಕ್ಟರ್ ಪಿ ಲಕ್ಷ್ಮ ರೆಡ್ಡಿ, ಗಂಗಾಧರ್ 8 ಮಂದಿ ಗ್ರಾಮಸ್ಥರು ಮತ್ತು ಸೋದರ ನಾಗಯ್ಯ ವಿರುದ್ಧ ದೂರು ನೀಡಿದ್ದಾರೆ. ಸೆಕ್ಷನ್ 336ರಡಿಯಲ್ಲಿ ಕೇಸು ದಾಖಲಾಗಿದೆ, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com