
ಗೌತಮ್ ಅದಾನಿ
ನವದೆಹಲಿ: ಸಮಿತಿಯೊಂದರಿಂದ ಹಿಂಡೆನ್‌ಬರ್ಗ್ ವರದಿ ತನಿಖೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಗೌತಮ್ ಅದಾನಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಇದು ಕಾಲಮಿತಿಯಲ್ಲಿ ಎಲ್ಲವನ್ನು ಅಂತ್ಯಗೊಳಿಸಲಿದೆ. ಸತ್ಯಕ್ಕೆ ಜಯ ಸಿಗಲಿದೆ ಎಂದು ಹೇಳಿದ್ದಾರೆ.
The Adani Group welcomes the order of the Hon'ble Supreme Court. It will bring finality in a time bound manner. Truth will prevail.
— Gautam Adani (@gautam_adani) March 2, 2023
ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಲ್ಲಿ ವಂಚನೆ ಆರೋಪ ಮಾಡಿದ ನಂತರ ಇತ್ತೀಚಿನ ಅದಾನಿ ಗ್ರೂಪ್ ಷೇರುಗಳ ಕುಸಿತ ಸೇರಿದಂತೆ ಷೇರು ಮಾರುಕಟ್ಟೆಗಳಿಗೆ ವಿವಿಧ ನಿಯಂತ್ರಕ ಅಂಶಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎ ಎಂ ಸಪ್ರೆ ನೇತೃತ್ವದ ಆರು ಸದಸ್ಯರ ಸಮಿತಿಯನ್ನು ರಚಿಸಲು ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.
ಇದನ್ನೂ ಓದಿ: ಅದಾನಿ-ಹಿಂಡೆನ್‌ಬರ್ಗ್ ವಿವಾದ: ತನಿಖೆಗಾಗಿ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದ 'ಸುಪ್ರೀಂ'
ಸಮಿತಿಯು ಪರಿಸ್ಥಿತಿಯ ಒಟ್ಟಾರೆ ಮೌಲ್ಯಮಾಪನ ಮಾಡುತ್ತದೆ, ಹೂಡಿಕೆದಾರರಿಗೆ ಅರಿವು ಮೂಡಿಸಲು ಮತ್ತು ಷೇರು ಮಾರುಕಟ್ಟೆಗಳಿಗೆ ಅಸ್ತಿತ್ವದಲ್ಲಿರುವ ನಿಯಂತ್ರಕ ಕ್ರಮಗಳನ್ನು ಬಲಪಡಿಸುವ ಕ್ರಮಗಳನ್ನು ಸೂಚಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರ ಪೀಠ ಹೇಳಿದೆ.
ಎರಡು ತಿಂಗಳೊಳಗೆ ತನ್ನ ವರದಿ ಸಲ್ಲಿಸಬೇಕಾದ ಸಮಿತಿಗೆ ಎಲ್ಲ ಸಹಕಾರ ನೀಡುವಂತೆ ಕೇಂದ್ರ, ಹಣಕಾಸು ಶಾಸನಬದ್ಧ ಸಂಸ್ಥೆಗಳು ಮತ್ತು ಸೆಬಿ ಅಧ್ಯಕ್ಷರಿಗೆ ಪೀಠ ಸೂಚಿಸಿದೆ. ಮಾಜಿ ನ್ಯಾಯಾಧೀಶರಾದ ಒಪಿ ಭಟ್ ಮತ್ತು ಜೆಪಿ ದೇವದತ್ ಕೂಡ ತನಿಖಾ ಸಮಿತಿಯ ಭಾಗವಾಗಿದ್ದಾರೆ.
ನ್ಯಾಯಾಲಯವು ನಂದನ್ ನಿಲೇಕಣಿ, ಕೆವಿ ಕಾಮತ್ ಮತ್ತು ಸೋಮಶೇಖರನ್ ಸುಂದರೇಶನ್ ಅವರನ್ನು ಸಮಿತಿಯ ಇತರ ಮೂವರು ಸದಸ್ಯರನ್ನಾಗಿ ಹೆಸರಿಸಿದೆ.