ಸಿಬಿಐ, ಇಡಿ ಬಿಜೆಪಿ, ಮೋದಿಯವರ ಅಸ್ತ್ರಗಳು, ಬಿಜೆಪಿಯವರ ಮೇಲೆ ದಾಳಿಯಾಗಿದ್ದು ಎಂದಾದರೂ ಕೇಳಿದ್ದೀರಾ?: ಕೆ ಟಿ ರಾಮ ರಾವ್

ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ತೆಲಂಗಾಣದ ಐಟಿ ಸಚಿವ ಕೆಟಿ ರಾಮರಾವ್ (ಕೆಟಿಆರ್) ಅವರು, “ಎಲ್ಲಾ ಏಜೆನ್ಸಿಗಳು... ಸಿಬಿಐ, ಇಡಿ, ಐಟಿ ಎಲ್ಲವೂ ಬಿಜೆಪಿ ಮತ್ತು ಮೋದಿಯವರ ಅಸ್ತ್ರಗಳು,  ಎನ್‌ಡಿಎ ಸರ್ಕಾರದ ಅವಿಭಾಜ್ಯ ಅಂಗಗಳಾಗಿವೆ ಎಂದು ಟೀಕಿಸಿದ್ದಾರೆ. 
ತೆಲಂಗಾಣ ಐಟಿ ಖಾತೆ ಸಚಿವ ಕೆ ಟಿ ರಾಮ ರಾವ್
ತೆಲಂಗಾಣ ಐಟಿ ಖಾತೆ ಸಚಿವ ಕೆ ಟಿ ರಾಮ ರಾವ್

ಹೈದರಾಬಾದ್: ಕೇಂದ್ರೀಯ ತನಿಖಾ ಸಂಸ್ಥೆಗಳು ಬಿಜೆಪಿಯ ಕೈಗೊಂಬೆಗಳು ಎಂದು ವಿರೋಧ ಪಕ್ಷಗಳು ಆಗಾಗ ಆರೋಪಿಸುವುದು ಟೀಕಿಸುವುದು ಉಂಟು. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಕುಟುಂಬದ ಮೇಲೆ ದೆಹಲಿ ಅಬಕಾರಿ ನೀತಿ ಹಗರಣ ವಿವಾದ ಸುತ್ತಿಕೊಂಡಿರುವ ಸಂದರ್ಭದಲ್ಲಿ ಇಡಿ, ಸಿಬಿಐಗಳು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ ಎಂದು ತೆಲಂಗಾಣದ ಬಿಆರ್ ಎಸ್ ಪಕ್ಷ ಕೂಡ ಆರೋಪಿಸುತ್ತಾ ಬಂದಿದೆ.

ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ತೆಲಂಗಾಣದ ಐಟಿ ಸಚಿವ ಕೆಟಿ ರಾಮರಾವ್ (ಕೆಟಿಆರ್) ಅವರು, “ಎಲ್ಲಾ ಏಜೆನ್ಸಿಗಳು... ಸಿಬಿಐ, ಇಡಿ, ಐಟಿ ಎಲ್ಲವೂ ಬಿಜೆಪಿ ಮತ್ತು ಮೋದಿಯವರ ಅಸ್ತ್ರಗಳು, ಎನ್‌ಡಿಎ ಸರ್ಕಾರದ ಅವಿಭಾಜ್ಯ ಅಂಗಗಳಾಗಿವೆ ಎಂದು ಟೀಕಿಸಿದ್ದಾರೆ. 

ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸುವ ಉಪಕ್ರಮವಾದ ಹೈದರಾಬಾದ್ ಡೈಲಾಗ್ಸ್‌ನ ಉದ್ಘಾಟನಾ ಸಂಚಿಕೆಯಲ್ಲಿ TNIE ನ ಸಂಪಾದಕರು ಮತ್ತು ವರದಿಗಾರರೊಂದಿಗೆ ಸಂವಾದ ನಡೆಸಿದ ಭಾರತ್ ರಾಷ್ಟ್ರ ಸಮಿತಿ (BRS) ಕಾರ್ಯಾಧ್ಯಕ್ಷರಾಗಿರುವ ಕೆಟಿ ಆರ್, ಸಹಜವಾಗಿ ತಮ್ಮ ಸೋದರಿ ಕವಿತಾ ವಿರುದ್ಧ ಇಡಿ ನಡೆಸುತ್ತಿರುವ ವಿಚಾರಣೆಗೆ ಆಕ್ರೋಶ ಹೊರಹಾಕಿದ್ದಾರೆ. 

ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯದ ಕವಿತಾ ಅವರನ್ನು ವಿಚಾರಣೆಗೆ ಕರೆಸಿತ್ತು. 

ಅದಾನಿ ಗುಂಪಿನಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಕರ್ನಾಟಕದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಪ್ರಶಾಂತ್ ಒಳಗೊಂಡಿರುವ ಲಂಚ ಹಗರಣವನ್ನು ಉಲ್ಲೇಖಿಸಿದ ಬಿಆರ್‌ಎಸ್ ನಾಯಕ, ಬಿಜೆಪಿ ನಾಯಕರ ಮೇಲೆ ಸಿಬಿಐ, ಇಡಿ ಅಥವಾ ಐಟಿ ದಾಳಿಯನ್ನು ಯಾರಾದರೂ ಕೇಳಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

12 ಲಕ್ಷ ಕೋಟಿಯ ಮಾರುಕಟ್ಟೆ ಮೌಲ್ಯ ಹೊರಹೋದ ನಂತರವೂ ಅದಾನಿ ಬಗ್ಗೆ ಪ್ರಧಾನಿ ಮೌನವಾಗಿರುವುದೇಕೆ? ಕರ್ನಾಟಕದಲ್ಲಿ ಗುತ್ತಿಗೆದಾರರ ಸಂಘವು ರಾಜ್ಯದಲ್ಲಿ ಶೇ 40ರಷ್ಟು ಕಮಿಷನ್‌ಗಳ ಬಗ್ಗೆ ದೂರು ನೀಡಿದರೂ ಏಕೆ ಕ್ರಮ ಕೈಗೊಂಡಿಲ್ಲ? ಅವರದೇ ಶಾಸಕರು ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿ ಪಟ್ಟ ಪಡೆಯಲು 2,500 ಕೋಟಿ ರೂಪಾಯಿ ನೀಡಬೇಕು ಎಂದು ಹಾಗಾದರೆ ಇಡಿ ಎಲ್ಲಿದೆ? ಅದು ಬದುಕಿದೆಯೇ ಅಥವಾ ಸತ್ತಿದೆಯೇ ಎಂದು ಅಚ್ಚರಿಯಾಗುತ್ತಿದೆ. “ನಮ್ಮ ಮನ್ ಕಿ ಬಾತ್ ನ್ನು ಕೇಳದ ಪ್ರಧಾನಿಯವರ ಮನ್ ಕಿ ಬಾತ್ ಅನ್ನು ಏಕೆ ಕೇಳಬೇಕು? ಎಂದು ಪ್ರಶ್ನಿಸಿದರು. 

ಕೇಂದ್ರ ಸರ್ಕಾರವು ತೆಲಂಗಾಣವನ್ನು "ಆರ್ಥಿಕ ನಿರ್ಬಂಧಗಳನ್ನು ಹೇರುವ ಶತ್ರು ರಾಷ್ಟ್ರ" ಎಂಬಂತೆ ಪರಿಗಣಿಸುತ್ತಿದೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಅಗತ್ಯವಿರುವ ಹಣ ಮತ್ತು ಸಾಲವನ್ನು ನೀಡದೆ ವಂಚಿಸುತ್ತಿದೆ ಎಂದು ಕೂಡ ದೂರಿದರು. 

ಕೆಟಿಆರ್ ಅವರನ್ನು ಅವರ ಅನುಯಾಯಿಗಳು ರಾಮಣ್ಣ ಎಂದೂ ಕರೆಯುತ್ತಾರೆ, ಅವರ ಬಗ್ಗೆ ಟೀಕಿಸುವವರು ಇದ್ದಾರೆ, ಆದರೆ ಅವರು ಭಾರತೀಯ ರಾಜಕೀಯದಲ್ಲಿರುವ ಬೇರೆ ಕುಟುಂಬ ರಾಜಕೀಯದಂತಲ್ಲ ಎಂದು ಅನೇಕ ಮಂದಿ ಹೇಳುವವರಿದ್ದಾರೆ. ಬಯೋಟೆಕ್ ಮತ್ತು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಚಿವರು, ಕಾರ್ಪೊರೇಟ್ ಉದ್ಯೋಗವನ್ನು ತೊರೆದ ನಂತರ 2009 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದಾಗಿನಿಂದ ತಮ್ಮದೇ ಆದ ಸ್ಥಾನವನ್ನು ಹೊಂದಿದ್ದಾರೆ. ಕಾರ್ಪೊರೇಟ್ ಜಗತ್ತಿನಲ್ಲಿರುವಂತೆ ರಾಜಕೀಯದಲ್ಲಿಯೂ ಅಷ್ಟೇ ನಿರಾಳವಾಗಿರುವ ಅವರು ಮುಂಬರುವ ರಾಜ್ಯ ಚುನಾವಣೆಗಳು ಮತ್ತು 2024 ರಲ್ಲಿ ಲೋಕಸಭೆಗೆ ನಡೆಯುವ ದೊಡ್ಡ ಹೋರಾಟದ ಬಗ್ಗೆ ಪ್ರಾಯೋಗಿಕವಾಗಿ ಮಾತನಾಡುತ್ತಾರೆ. 

'ಕಾಂಗ್ರೆಸ್ ಅವಧಿ ಮೀರಿದೆ':  BRS ಕಾರ್ಯಾಧ್ಯಕ್ಷರು ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟಕ್ಕೆ ಬಿಆರ್ ಎಸ್ ನ್ನು ತೆಗೆದುಕೊಂಡು ಹೋಗುವ ಬಗ್ಗೆ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ತಂತ್ರಗಳನ್ನು ಯೋಜಿಸಲು ಸಮಯ ತೆಗೆದುಕೊಳ್ಳುತ್ತದೆ. ನಾವು ಸಂಸತ್ತಿನ ಚುನಾವಣೆಗಳ ಮೇಲೆ ಕೇಂದ್ರೀಕರಿಸಲು ಮತ್ತು ನಮ್ಮ ತೆಲಂಗಾಣ ಮಾದರಿಯನ್ನು ಪ್ರಸಾರ ಮಾಡಲು ಬಯಸುತ್ತೇವೆ. ಏನಾಗುತ್ತದೆ ಎಂದು ಮುಂದೆ ನೋಡೋಣ, ಹಾಗೆಂದು ಮೊಂಡುತನದ ಮೈತ್ರಿಯನ್ನು ಯಾವುದೇ ಪಕ್ಷಗಳೊಂದಿಗೆ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ.

ಕರ್ನಾಟಕದಲ್ಲಿ ಜೆಡಿ (ಎಸ್) ನೊಂದಿಗೆ ಮೈತ್ರಿಯನ್ನು ನಿರಾಕರಿಸಿ ಮತ್ತು ಬಿಜೆಪಿಯೇತರ ಪಾಳಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುವ ಬಗ್ಗೆಯೂ ನಿರಾಕರಿಸಿದರು. ಕಾಂಗ್ರೆಸ್ ಪರಿಸ್ಥಿತಿ ಯುದ್ಧ ಪ್ರಾರಂಭವಾಗುವ ಮೊದಲೇ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದಂತೆ ಎಂದು ಹೇಳಿದರು.

ಪಕ್ಷಗಳು ತೃತೀಯ ರಂಗದ ಕಲ್ಪನೆಯನ್ನು ತಳ್ಳಿಹಾಕಬೇಕು ಎಂಬ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಹೇಳಿಕೆಯನ್ನು ಒತ್ತಿಹೇಳಿರುವ ಕೆಟಿಆರ್, ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಬಾರದು ಎಂಬ ದೃಷ್ಟಿಯಿಂದ ಬಿಆರ್‌ಎಸ್ ಮತ್ತು ಡಿಎಂಕೆ ನಡುವೆ ಸಾಮಾನ್ಯತೆ ಇದೆ ಎಂದರು. 

"ಅವರಿಗೆ ಅವರ ಅಭಿಪ್ರಾಯವಿದೆ, ನಮ್ಮದು ಇದೆ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮುಖಾಮುಖಿಯಾದಲ್ಲೆಲ್ಲಾ ನಂತರದವರಿಗೆ ಲಾಭವಿದೆ. ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿ ಬಿಜೆಪಿಗೆ ಸ್ಪರ್ಧೆ ನೀಡಬೇಕು. ಕಾಂಗ್ರೆಸ್ ಈಗ ಅವಧಿ ಮೀರಿದ ಪಕ್ಷವಾಗಿದೆ. ತೆಲಂಗಾಣದಲ್ಲಿ ಕೂಡ ಪರಿಸ್ಥಿತಿ ಹಾಗಿದೆ ಎಂದರು. 

ಕೆಸಿಆರ್ ಮತ್ತೆ ಗೆಲ್ಲುತ್ತಾರೆ: "ತಮ್ಮ ತಂದೆ ಕೆ ಚಂದ್ರಶೇಖರ ರಾವ್ (ಕೆಸಿಆರ್) ಸತತ ಮೂರನೇ ಅವಧಿಗೆ ಗೆಲ್ಲುತ್ತಾರೆ ಎಂದು ಬಿಆರ್‌ಎಸ್ ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಅವರು ಸತತ ಮೂರು ಬಾರಿ ಗೆದ್ದ ದಕ್ಷಿಣ ಭಾರತದ ಮೊದಲ ಮುಖ್ಯಮಂತ್ರಿಯಾಗುತ್ತಾರೆ. ನನಗೆ ಯಾವುದೇ ಸಂದೇಹವಿಲ್ಲ. ಜಯಲಲಿತಾ, ರಾಜಶೇಖರ್ ರೆಡ್ಡಿ, ಎಂಜಿಆರ್, ಚಂದ್ರಬಾಬು ನಾಯ್ಡು ಅಥವಾ ನಂಬೂದರಿಪಾಡ್ ಸೇರಿದಂತೆ ಯಾರೂ ಇದನ್ನು ಮಾಡಿಲ್ಲ."

ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ವಿರುದ್ಧದ ಮನವಿ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, 2018 ರ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷವು 107 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿರುವುದನ್ನು ನೆನಪಿಸಿಕೊಂಡ ಅವರು, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಕೇಂದ್ರವು ವೈದ್ಯಕೀಯ, ಎಂಜಿನಿಯರಿಂಗ್ ಅಥವಾ ನರ್ಸಿಂಗ್ ಕಾಲೇಜುಗಳನ್ನು ಮಂಜೂರು ಮಾಡಿಲ್ಲ ಮತ್ತು ಎಪಿ ಮರುಸಂಘಟನೆ ಕಾಯಿದೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಮತದಾರರನ್ನು ಕೇಳಲು ನಮಗೆ ಧೈರ್ಯವಿದೆ, ಬಿಜೆಪಿಗಿದೆಯೇ ಎಂದು ಪ್ರಶ್ನಿಸಿದರು. 

ಮುನುಗೋಡು ಉಪಚುನಾವಣೆಯಲ್ಲಿ ಬಿಜೆಪಿ ತನ್ನ ಪಕ್ಷಕ್ಕೆ ಕಠಿಣ ಹೋರಾಟ ನೀಡಿದ್ದನ್ನು ನೆನಪಿಸಿಕೊಂಡ ಕೆಟಿಆರ್, ರಾಜಕೀಯದಲ್ಲಿ ಯಾವುದೇ ನೈತಿಕ ಗೆಲುವುಗಳಿಲ್ಲ ಎಂದು ಹೇಳುವ ಮೂಲಕ "ಜೋ ಜೀತಾ ವೋಹಿ ಸಿಕಂದರ್" ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com