'ಅರ್ಥವಿಲ್ಲದ ಪ್ರಲಾಪ': ಪ್ರಧಾನಿಗೇ ಮೋದಿ ಫೋಟೋ ಗಿಫ್ಟ್ ಟೀಕಿಸಿದ ಕಾಂಗ್ರೆಸ್‌ ಗೆ ಕೇಂದ್ರ ತಿರುಗೇಟು

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರ ಫೋಟೋವನ್ನೇ ಉಡುಗೊರೆಯಾಗಿ ನೀಡಿರುವುದನ್ನು ಟೀಕಿಸಿದ ಕಾಂಗ್ರೆಸ್ ವಿರುದ್ಧ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು,...
ಮೋದಿ ಫೋಟೋ ಗಿಫ್ಟ್
ಮೋದಿ ಫೋಟೋ ಗಿಫ್ಟ್

ನವದೆಹಲಿ: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರ ಫೋಟೋವನ್ನೇ ಉಡುಗೊರೆಯಾಗಿ ನೀಡಿರುವುದನ್ನು ಟೀಕಿಸಿದ ಕಾಂಗ್ರೆಸ್ ವಿರುದ್ಧ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದು 'ಅರ್ಥವಿಲ್ಲದ ಪ್ರಲಾಪ' ಎಂದು ತಿರುಗೇಟು ನೀಡಿರುವುದಾಗಿ  ಸರ್ಕಾರಿ ಮೂಲಗಳು ಶುಕ್ರವಾರ ತಿಳಿಸಿವೆ.

ಕಳೆದ 75 ವರ್ಷಗಳಲ್ಲಿ ಉಭಯ ರಾಷ್ಟ್ರಗಳಿಗಾಗಿ ಆಡಿದ ಎಲ್ಲಾ ಕ್ರಿಕೆಟಿಗರ ಕೊಲಾಜ್ ನಿಂದ ಮಾಡಲಾದ ಪ್ರಧಾನಿ ಮೋದಿ ಫೋಟೋಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಇದೊಂದು ವಿಶೇಷ ಆತಿಥ್ಯ ಎಂದು ಸರ್ಕಾರದ ಮೂಲಗಳು ಹೇಳಿವೆ.

ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಟನಿ ಅಲ್ಬನೀಸ್ ವೀಕ್ಷಿಸಿದ್ದರು.

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಅಲ್ಬನೀಸ್ ಅವರಿಗೆ ಭಾವಚಿತ್ರವನ್ನು ನೀಡಿದರೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪ್ರಧಾನಿ ಮೋದಿಗೆ ಭಾವಚಿತ್ರವನ್ನು ಗಿಫ್ಟ್ ಆಗಿ ನೀಡಿದ್ದರು.

ಪ್ರಧಾನಿ ಮೋದಿ ಅವರು ಬಿಸಿಸಿಐ ಕಾರ್ಯದರ್ಶಿಯಿಂದ ಉಡುಗೊರೆ ಸ್ವೀಕರಿಸುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿದ ಕಾಂಗ್ರೆಸ್, "ನರೇಂದ್ರ ಮೋದಿ ಅವರ ಸ್ನೇಹಿತನ ಮಗ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನರೇಂದ್ರ ಮೋದಿಯವರಿಗೆ ನರೇಂದ್ರ ಮೋದಿ ಅವರ ಫೋಟೋ ಉಡುಗೊರೆ ನೀಡುತ್ತಾರೆ" ಎಂದು ವ್ಯಂಗ್ಯವಾಡಿತ್ತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿಗೆ, ಮೋದಿ ಫೋಟೋ ಉಡುಗೊರೆ. ಇದು ಸ್ವಂಯ ಪ್ರಚಾರ ಗೀಳಿನ ಉತ್ಕೃಷ್ಟ ಮಟ್ಟ ಎಂದು ಕಾಂಗ್ರೆಸ್ ಟೀಕಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com