ಪತಿಯನ್ನು ಕೊಂದು ಮನೆಯಲ್ಲೇ ಶವ ಸುಡಲು ಮಹಿಳೆ ಯತ್ನ; ಪೊಲೀಸರನ್ನು ತಡೆಯಲು ಬಾಗಿಲಿಗೆ ವಿದ್ಯುದೀಕರಣ!
ಜಾರ್ಖಂಡ್‌ನ ಜೆಮ್‌ಶೆಡ್‌ಪುರದ ಓಲ್ಡ್ ಸುಭಾಷ್ ಕಾಲೋನಿಯಲ್ಲಿ ಮಹಿಳೆಯೊಬ್ಬರು ಪತಿಯನ್ನು ಕೊಂದು ಶವವನ್ನು ಮನೆಯೊಳಗೆ ಸುಡಲು ಯತ್ನಿಸಿದ್ದಾರೆ. ಆರೋಪಿ ಮಹಿಳೆ ಒಳಗಿನಿಂದ ಬೀಗ ಹಾಕಿಕೊಂಡು, ಪೊಲೀಸರು ಒಳನುಗ್ಗದಂತೆ ತಡೆಯಲು ಬಾಗಿಲಿಗೆ ವಿದ್ಯುದೀಕರಣ ಮಾಡಿದ್ದಾರೆ.
Published: 10th March 2023 04:00 PM | Last Updated: 10th March 2023 09:30 PM | A+A A-

ಪ್ರಾತಿನಿಧಿಕ ಚಿತ್ರ
ಜೆಮ್‌ಶೆಡ್‌ಪುರ: ಜಾರ್ಖಂಡ್‌ನ ಜೆಮ್‌ಶೆಡ್‌ಪುರದ ಓಲ್ಡ್ ಸುಭಾಷ್ ಕಾಲೋನಿಯಲ್ಲಿ ಮಹಿಳೆಯೊಬ್ಬರು ಪತಿಯನ್ನು ಕೊಂದು ಶವವನ್ನು ಮನೆಯೊಳಗೆ ಸುಡಲು ಯತ್ನಿಸಿದ್ದಾರೆ. ಆರೋಪಿ ಮಹಿಳೆ ಒಳಗಿನಿಂದ ಬೀಗ ಹಾಕಿಕೊಂಡು, ಪೊಲೀಸರು ಒಳನುಗ್ಗದಂತೆ ತಡೆಯಲು ಬಾಗಿಲಿಗೆ ವಿದ್ಯುದೀಕರಣ ಮಾಡಿದ್ದಾರೆ.
ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಮೃತರನ್ನು ಅಮರನಾಥ್ ಸಿಂಗ್ ಎಂದು ಗುರುತಿಸಲಾಗಿದ್ದು, ಇವರು ಸಾರಿಗೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ಉದ್ಯೋಗ ಮತ್ತು ಅಧ್ಯಯನಕ್ಕಾಗಿ ವಿವಿಧ ನಗರಗಳಲ್ಲಿ ವಾಸಿಸುತ್ತಿದ್ದಾರೆ.
ಆರೋಪಿ ಮೀರಾ ಸಿಂಗ್‌ರನ್ನು ಬಂಧಿಸಲಾಗಿದೆ. ಆ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನಂತರ ಪೊಲೀಸರು ಅತ್ಯಂತ ಪ್ರಯಾಸದಿಂದ ಮನೆಯೊಳಗೆ ಪ್ರವೇಶಿಸಿ ಅರ್ಧ ಸುಟ್ಟ ದೇಹವನ್ನು ವಶಕ್ಕೆ ಪಡೆದಿದ್ದಾರೆ.
ಮೀರಾ ಮಾನಸಿಕ ಅಸ್ವಸ್ಥಳಾಗಿದ್ದು, ದಂಪತಿ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ನೆರೆಹೊರೆಯವರು ಆರೋಪಿಸಿದ್ದಾರೆ.
ಮನೆಯಿಂದ ದುರ್ವಾಸನೆ ಬರಲಾರಂಭಿಸಿದ್ದು, ನೆರೆಹೊರೆಯವರು ಪುಣೆಯಲ್ಲಿ ವಾಸಿಸುವ ದಂಪತಿಯ ಮಗನಿಗೆ ವಿಚಾರ ತಿಳಿಸಿದಾಗ ಕೊಲೆ ಬೆಳಕಿಗೆ ಬಂದಿದೆ.
ಪೊಲೀಸರು ಸ್ಥಳಕ್ಕೆ ತಲುಪಿದಾಗ ಮಹಿಳೆ ಛಾವಣಿ ಮೇಲೆ ಹತ್ತಿ ಕೋಲು ಹಿಡಿದು ಜನರನ್ನು ಬೆದರಿಸಿದ್ದಾರೆ.
ನೆರೆಹೊರೆಯವರ ಪ್ರಕಾರ, ಮೃತರು ಕಳೆದ ನಾಲ್ಕೈದು ದಿನಗಳಿಂದ ಮನೆಯಿಂದ ಹೊರಗೆ ಬಂದಿರಲಿಲ್ಲ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.