ಇ.ಡಿ ದಾಳಿ ವೇಳೆ ಗರ್ಭಿಣಿ ಸೊಸೆಗೆ ಕಿರುಕುಳ; ತನಿಖಾ ಸಂಸ್ಥೆಯ ವಿರುದ್ಧ ಲಾಲು ಪ್ರಸಾದ್ ಕಿಡಿ; ಖರ್ಗೆ ಆಕ್ರೋಶ

ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಮಗ ತೇಜಸ್ವಿ ಯಾದವ್ ಅವರ ದೆಹಲಿ ನಿವಾಸದಲ್ಲಿ ದಾಳಿಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತನ್ನ ಗರ್ಭಿಣಿ ಸೊಸೆಯನ್ನು 15 ಗಂಟೆಗಳ ಕಾಲ ಕುಳಿತುಕೊಳ್ಳುವಂತೆ ಮಾಡಿದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಶನಿವಾರ ಆರೋಪಿಸಿದ್ದಾರೆ.
ಲಾಲೂ ಪ್ರಸಾದ್ ಯಾದವ್
ಲಾಲೂ ಪ್ರಸಾದ್ ಯಾದವ್

ಪಾಟ್ನಾ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಮಗ ತೇಜಸ್ವಿ ಯಾದವ್ ಅವರ ದೆಹಲಿ ನಿವಾಸದಲ್ಲಿ ದಾಳಿಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತನ್ನ ಗರ್ಭಿಣಿ ಸೊಸೆಯನ್ನು 15 ಗಂಟೆಗಳ ಕಾಲ ಕುಳಿತುಕೊಳ್ಳುವಂತೆ ಮಾಡಿದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಶನಿವಾರ ಆರೋಪಿಸಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಆರೋಪವನ್ನು ಮಾಡಿರುವ ಲಾಲು, 'ಸಂಘ ಪರಿವಾರ (ಆರ್‌ಎಸ್‌ಎಸ್) ಮತ್ತು ಬಿಜೆಪಿ ವಿರುದ್ಧ ನನ್ನ ಸೈದ್ಧಾಂತಿಕ ಹೋರಾಟ ಹಿಂದೆಯೂ ಇತ್ತು ಮತ್ತು ಮುಂದುವರಿಯಲಿದೆ. ನಾನು ಅವರ ಮುಂದೆ ಎಂದಿಗೂ ತಲೆತಗ್ಗಿಸಿಲ್ಲ ಮತ್ತು ನಾನು ಮತ್ತು ನನ್ನ ಕುಟುಂಬದ ಯಾರೊಬ್ಬರೂ ನಿಮ್ಮ (ಬಿಜೆಪಿ) ರಾಜಕೀಯದ ಮುಂದೆ ತಲೆಬಾಗುವುದಿಲ್ಲ' ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ನಾನು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನೂ ನೋಡಿದ್ದೇನೆ. ಅದರ ವಿರುದ್ಧ ನಾನು ಹೋರಾಟ ಮಾಡಿದ್ದೇನೆ. ಬಿಜೆಪಿಯ ಪ್ರಭಾವದಿಂದ ಇ.ಡಿ ನನ್ನ ಪುತ್ರಿಯರು, ಚಿಕ್ಕ ಮೊಮ್ಮಕ್ಕಳು ಮತ್ತು ಗರ್ಭಿಣಿ ಸೊಸೆಯನ್ನು ಆಧಾರರಹಿತ ಮತ್ತು ಪ್ರತೀಕಾರದ ಪ್ರಕರಣಗಳಲ್ಲಿ 15 ಗಂಟೆಗಳ ಕಾಲ ಕುಳಿತುಕೊಳ್ಳುವಂತೆ ಮಾಡಿದೆ. ನನ್ನ ವಿರುದ್ಧ ರಾಜಕೀಯ ಹೋರಾಟ ನಡೆಸಲು ಬಿಜೆಪಿ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯುತ್ತದೆಯೇ?' ಎಂದು ಪ್ರಶ್ನಿಸಿದ್ದಾರೆ.

ಲಾಲುಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿ, 'ಮೋದಿ ಜಿ (ಪ್ರಧಾನಿ ನರೇಂದ್ರ ಮೋದಿ) ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ನಿವಾಸದಲ್ಲಿ 14 ಗಂಟೆಗಳ ಕಾಲ ಇ.ಡಿಯನ್ನು ಇರಿಸಿದ್ದಾರೆ. ಅವರ (ತೇಜಸ್ವಿ) ಪತ್ನಿ ಮತ್ತು ಸೋದರಿಯರನ್ನು ಪೀಡಿಸಲಾಗುತ್ತಿದೆ. ವಯೋವೃದ್ಧರು, ಅನಾರೋಗ್ಯದಿಂದ ಬಳಲುತ್ತಿರುವ ಲಾಲು ಜಿಯವರ ಮೇಲೆ ಮೋದಿ ಸರ್ಕಾರ ಮಾನವೀಯತೆ ತೋರಲಿಲ್ಲ' ಎಂದು ಕಿಡಿಕಾರಿದ್ದಾರೆ.

'ವಿರೋಧ ಪಕ್ಷದ ನಾಯಕರ ವಿರುದ್ಧ ಇ.ಡಿ-ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಮೋದಿ ಸರ್ಕಾರ ಪ್ರಜಾಪ್ರಭುತ್ವವನ್ನು ನಾಶಮಾಡುವ ಹೀನ ಪ್ರಯತ್ನ ನಡೆಸುತ್ತಿದೆ. ಕೋಟ್ಯಂತರ ರೂ.ಗಳೊಂದಿಗೆ ದೇಶ ಬಿಟ್ಟು ಪರಾರಿಯಾಗುವಾಗ ಈ ಕೇಂದ್ರೀಯ ಸಂಸ್ಥೆಗಳು ಎಲ್ಲಿದ್ದವು. ಆತ್ಮೀಯ ಸ್ನೇಹಿತನ (ಪರಮ ಮಿತ್ರ) ಆಸ್ತಿಯ ಮೌಲ್ಯವು ಆಕಾಶ ಮುಟ್ಟಿದಾಗ, ಏಕೆ ತನಿಖೆ ನಡೆಸಲಿಲ್ಲ? ಈ ಸರ್ವಾಧಿಕಾರಕ್ಕೆ ಜನರು ತಕ್ಕ ಉತ್ತರ ನೀಡುತ್ತಾರೆ'. ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com