ಗೋವಾದ ಅಂಜುನಾ ಬೀಚ್ ನಲ್ಲಿ ದೆಹಲಿ ಮೂಲದ ಪ್ರವಾಸಿಗರ ಮೇಲೆ ಹಲ್ಲೆ: ನಾಲ್ವರ ಬಂಧನ
ಗೋವಾದ ಪ್ರಸಿದ್ಧ ಅಂಜುನಾ ಬೀಚ್‌ನಲ್ಲಿ ದೆಹಲಿ ಮೂಲದ ಕುಟುಂಬವೊಂದರ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Published: 13th March 2023 07:19 PM | Last Updated: 14th March 2023 07:49 PM | A+A A-

ಹಲ್ಲೆಗೊಳಗಾದ ದಂಪತಿ
ಪಣಜಿ: ಗೋವಾದ ಪ್ರಸಿದ್ಧ ಅಂಜುನಾ ಬೀಚ್‌ನಲ್ಲಿ ದೆಹಲಿ ಮೂಲದ ಕುಟುಂಬವೊಂದರ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಪಾರ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ ಕರಾವಳಿ ರಾಜ್ಯದಲ್ಲಿ ಇಂತಹ ಘಟನೆಗಳನ್ನು ಸಹಿಸಲಾಗುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಗ್ಯಾಂಗ್ ವೊಂದು ತಮ್ಮ ಕುಟುಂಬದ ಮೇಲೆ ಬೆಲ್ಟ್, ಬೇಸ್ ಬಾಲ್ ಬ್ಯಾಟ್ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೆಹಲಿಯ 47 ವರ್ಷದ ನಿವಾಸಿಯೊಬ್ಬರು ಮಾರ್ಚ್ 5 ರಂದು ದೂರು ದಾಖಲಿಸಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜಿವ್ಬಾ ದಾಳ್ವಿ ತಿಳಿಸಿದ್ದಾರೆ.
ಎಫ್ ಐಆರ್ ಪ್ರಕಾರ ದೂರುದಾರರು ಮತ್ತಿತರ ಮೇಲೆ ಅವರು ಹಲ್ಲೆ ನಡೆಸಿದ್ದಾರೆ. ಸಂತ್ರಸ್ತರ ದೇಹದ ಮೇಲೆ ಗಾಯ ಉಂಟು ಮಾಡಲು ಆರೋಪಿಗಳು ಚಾಕು ಮತ್ತಿತರ ಶಸ್ತ್ರಾಸ್ತ್ರಗಳನ್ನು ಬಳಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಗುರುತಿಸಲಾಗಿದ್ದು, ಭಾನುವಾರ ಬಂಧಿಸಲಾಗಿದೆ. ಶೀಘ್ರವೇ ಹೆಚ್ಚಿನವರನ್ನು ಬಂಧಿಸಲಾಗುವುದು, ದಾಳಿಗೆ ಕಾರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.