ಶಿವಸೇನಾ ಶಾಸಕ, ಪಕ್ಷದ ನಾಯಕಿಯ 'ತಿರುಚಿದ' ವಿಡಿಯೋ ಪ್ರಕರಣ: ಎಸ್‌ಐಟಿಯಿಂದ ತನಿಖೆ

ಶಿವಸೇನಾ ಶಾಸಕ ಪ್ರಕಾಶ್ ಸುರ್ವೆ ಮತ್ತು ಪಕ್ಷದ ಉಪ ನಾಯಕಿ ಶೀತಲ್ ಮ್ಹಾತ್ರೆ ಅವರ ಮಾರ್ಫ್ ಮಾಡಲಾದ ವಿಡಿಯೋ ಕುರಿತು ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸಲಿದೆ...
ಪ್ರಕಾಶ್ ಸುರ್ವೆ ಮತ್ತು ಶೀತಲ್ ಮ್ಹಾತ್ರೆ
ಪ್ರಕಾಶ್ ಸುರ್ವೆ ಮತ್ತು ಶೀತಲ್ ಮ್ಹಾತ್ರೆ

ಮುಂಬೈ: ಶಿವಸೇನಾ ಶಾಸಕ ಪ್ರಕಾಶ್ ಸುರ್ವೆ ಮತ್ತು ಪಕ್ಷದ ಉಪ ನಾಯಕಿ ಶೀತಲ್ ಮ್ಹಾತ್ರೆ ಅವರ ಮಾರ್ಫ್ ಮಾಡಲಾದ ವಿಡಿಯೋ ಕುರಿತು ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸಲಿದೆ ಎಂದು ಮಹಾರಾಷ್ಟ್ರ ಸಚಿವ ಶಂಬುರಾಜ್ ದೇಸಾಯಿ ಸೋಮವಾರ ತಿಳಿಸಿದ್ದಾರೆ.

ಈ ಸಂಬಂಧ ಉದ್ಧವ್ ಠಾಕ್ರೆ ಬಣದ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣ ಸಂಬಂಧ ಇದುವರೆಗೆ ಐವರನ್ನು ಬಂಧಿಸಿದಂತಾಗಿದೆ ಎಂದು ಅವರು ಹೇಳಿದ್ದಾರೆ.

ಇಂದು ವಿಧಾನಸಭೆಯಲ್ಲಿ ಮಾತನಾಡಿದ ದೇಸಾಯಿ, ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಎಸ್‌ಐಟಿಯ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಶಿವಸೇನೆ ಶಾಸಕರಾದ ಯಾಮಿನಿ ಜಾಧವ್ ಮತ್ತು ಮನೀಶಾ ಚೌಧರಿ ಅವರು, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಸ್ಥಳೀಯ ಸಂಸದ ಗೋಪಾಲ್ ಶೆಟ್ಟಿ ಅವರು ಭಾಗವಹಿಸಿದ್ದ ಸಾರ್ವಜನಿಕ ಕಾರ್ಯಕ್ರಮದ ವಿಡಿಯೋ ಮಾರ್ಫಿಂಗ್ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಶಿವಸೇನೆಯ(ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಾಮಾಜಿಕ ಮಾಧ್ಯಮ ರಾಜ್ಯ ಸಂಯೋಜಕ ವಿನಾಯಕ್ ದಾವರೆ(26) ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ದಾವರೆ ಫೇಸ್‌ಬುಕ್‌ನಲ್ಲಿ ಮಾರ್ಫ್ ಮಾಡಿದ ವೀಡಿಯೊವನ್ನು ಪೋಸ್ಟ್ ಮಾಡಿದ್ದರೆ, ಇತರ ಮೂವರು ಅದನ್ನು ವೈರಲ್ ಮಾಡಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com