ತೆಲಂಗಾಣ: ಬೀದಿ ನಾಯಿಗಳ ಹಾವಳಿಗೆ ಮತ್ತೊಂದು ಮಗುವಿನ ಜೀವ ಬಲಿ

ಬೀದಿ ನಾಯಿಗಳ ಹಾವಳಿ ತೆಲಂಗಾಣದಲ್ಲಿ ಮತ್ತೊಂದು ಮಗುವಿನ ಜೀವವನ್ನು ಬಲಿತೆಗೆದುಕೊಂಡಿದ್ದು, ಖಮ್ಮಂ ಜಿಲ್ಲೆಯಲ್ಲಿ ರೇಬಿಸ್‌ಗೆ ಐದು ವರ್ಷದ ಮಗು ಬಲಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: ಬೀದಿ ನಾಯಿಗಳ ಹಾವಳಿ ತೆಲಂಗಾಣದಲ್ಲಿ ಮತ್ತೊಂದು ಮಗುವಿನ ಜೀವವನ್ನು ಬಲಿತೆಗೆದುಕೊಂಡಿದ್ದು, ಖಮ್ಮಂ ಜಿಲ್ಲೆಯಲ್ಲಿ ರೇಬಿಸ್‌ಗೆ ಐದು ವರ್ಷದ ಮಗು ಬಲಿಯಾಗಿದೆ.

ಕೆಲ ದಿನಗಳ ಹಿಂದೆ ಬೀದಿನಾಯಿಗಳಿಂದ ಕಚ್ಚಿಸಿಕೊಂಡಿದ್ದ ಬಾನೋತ್ ಭರತ್‌ಗೆ ರೇಬಿಸ್‌ ಲಕ್ಷಣಗಳು ಕಂಡು ಬಂದಿದ್ದು, ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕರೆತರುತ್ತಿದ್ದಾಗ ಮೃತಪಟ್ಟಿದ್ದಾರೆ.

ಮಗುವಿನ ಪೋಷಕರಾದ ಬಿ.ರವೀಂದರ್ ಮತ್ತು ಸಂಧ್ಯಾ ಅವರ ಪ್ರಕಾರ, ರಘುನಾಥಪಾಲೆಂ ಮಂಡಲದ ಪುಟಾಣಿ ತಾಂಡಾದಲ್ಲಿ ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಬೀದಿ ನಾಯಿಗಳ ಹಿಂಡು ದಾಳಿ ಮಾಡಿ ಗಾಯಗೊಳಿಸಿವೆ. ಭಾನುವಾರ ಬಾಲಕ ಅಸ್ವಸ್ಥಗೊಂಡಿದ್ದು, ಖಮ್ಮಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಾಲಕನನ್ನು ತಪಾಸಣೆಗೊಳಪಡಿಸಿದ ವೈದ್ಯರು ರೇಬಿಸ್‌ ಎಂದು ಶಂಕಿಸಿದ್ದು, ಹೈದರಾಬಾದ್‌ಗೆ ಕರೆದೊಯ್ಯುವಂತೆ ಪೋಷಕರಿಗೆ ಸೂಚಿಸಿದ್ದಾರೆ.

ರವೀಂದರ್ ಮತ್ತು ಸಂಧ್ಯಾ ತಮ್ಮ ಮಗನೊಂದಿಗೆ ಟಿಎಸ್ಆರ್‌ಟಿಸಿ ಬಸ್‌ನಲ್ಲಿ ಹೈದರಾಬಾದ್‌ಗೆ ಹೊರಟಿದ್ದಾರೆ. ಆದರೆ, ಮಾರ್ಗಮಧ್ಯೆ ಮಗುವಿನ ಸ್ಥಿತಿ ಹದಗೆಟ್ಟಿದ್ದು, ಸೋಮವಾರ ಸೂರ್ಯಪೇಟೆ ಬಳಿ ಸಾವಿಗೀಡಾಗಿದೆ.

ಭರತ್ ಅವರ ವೈದ್ಯಕೀಯ ವರದಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ರಾಜ್ಯದಲ್ಲಿ ಸಂಭವಿಸಿದ ಎರಡನೇ ಸಾವು ಇದಾಗಿದೆ.
ಕಳೆದ ತಿಂಗಳು ಹೈದರಾಬಾದ್‌ನಲ್ಲಿ ನಾಲ್ಕು ವರ್ಷದ ಬಾಲಕನನ್ನು ಬೀದಿನಾಯಿಗಳ ಹಿಂಡು ದಾಳಿ ನಡೆಸಿ ಕೊಂದಿತ್ತು. ಬಾಲಕನ ತಂದೆ ಮಾಚ್‌ಮೆನ್‌ ಆಗಿ ಕೆಲಸ ಮಾಡುತ್ತಿದ್ದ ಕಾರ್ ಸರ್ವಿಸ್ ಸೆಂಟರ್‌ನಲ್ಲಿ ಫೆಬ್ರುವರಿ 19 ರಂದು ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.

ಇದೇ ವೇಳೆ, ಖಮ್ಮಂ ಮತ್ತು ವಿಕಾರಾಬಾದ್ ಜಿಲ್ಲೆಗಳಲ್ಲಿ ಸೋಮವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಬೀದಿ ನಾಯಿಗಳ ದಾಳಿಗೆ ಇಬ್ಬರು ಮಕ್ಕಳು ಗಾಯಗೊಂಡಿದ್ದು, ಏಳು ಮೇಕೆಗಳು ಮೃತಪಟ್ಟಿವೆ.

ಖಮ್ಮಂ ಜಿಲ್ಲೆಯ ಮಧಿರಾ ಪುರಸಭೆ ವ್ಯಾಪ್ತಿಯ ಜಿಲುಗುಮಡು ಗ್ರಾಮದಲ್ಲಿ ದೋರ್ನಾಳ ವಿವೇಕ್ (5) ಎಂಬಾತ ತಮ್ಮ ಮನೆಯ ಮುಂದೆ ಆಟವಾಡುತ್ತಿದ್ದಾಗ ನಾಯಿಗಳು ಕಚ್ಚಿವೆ. ಆತನ ತಂದೆ ರಕ್ಷಣೆಗೆ ಬಂದು ನಾಯಿಗಳನ್ನು ಓಡಿಸಿದ್ದಾರೆ. ಬಾಲಕನ ಕೈಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

ವಿಕಾರಾಬಾದ್ ಜಿಲ್ಲೆಯಲ್ಲಿ ಬೀದಿ ನಾಯಿಗಳ ದಾಳಿಯಿಂದ 12 ವರ್ಷದ ಬಾಲಕ ಗಾಯಗೊಂಡಿದ್ದಾನೆ. ಸೋಮವಾರ ಸಂಜೆ ಶಿವಕುಮಾರ್ ರೆಡ್ಡಿ ಹೊಲದಿಂದ ಮನೆಗೆ ಮರಳುತ್ತಿದ್ದಾಗ ಬೀದಿನಾಯಿಗಳ ಹಿಂಡು ದಾಳಿ ನಡೆಸಿವೆ. ಆತನ ಮುಖದ ಮೇಲೆ ಗಂಭೀರ ಗಾಯಗಳಾಗಿವೆ. ಆರಂಭದಲ್ಲಿ ಆತನನ್ನು ಪಟ್ಟಣದ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ನಂತರ, ಮಹಬೂಬ್‌ನಗರಕ್ಕೆ ಸ್ಥಳಾಂತರಿಸಲಾಯಿತು.

ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯದ ವಿವಿಧೆಡೆ ನಡೆದ ಸರಣಿ ಘಟನೆಗಳು ಜನರನ್ನು ಭಯಭೀತಗೊಳಿಸಿವೆ. ಕಳೆದ ತಿಂಗಳು ಹೈದರಾಬಾದ್‌ನಲ್ಲಿ ನಡೆದ ಘಟನೆಯ ನಂತರ, ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಪುರಸಭೆಯ ಅಧಿಕಾರಿಗಳು ಹಲವಾರು ಕ್ರಮಗಳನ್ನು ಘೋಷಿಸಿದ್ದರು. ಆದರೆ, ಈ ಕ್ರಮಗಳು ಇನ್ನೂ ಜಾರಿಗೆ ಬಂದಿಲ್ಲ ಎಂದು ನಾಗರಿಕರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com