ಅದಾನಿ ಗ್ರೂಪ್ ವಿಚಾರ: ಸಂಸತ್ತು ಭವನದಿಂದ ಇಡಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಿರುವ ವಿರೋಧ ಪಕ್ಷಗಳ ಸಂಸದರು
ಅದಾನಿ ಗ್ರೂಪ್ ಷೇರುಗಳ ಇಳಿಕೆ, ಹಿಂಡನ್ ಬರ್ಗ್ ವರದಿ, ಗೌತಮ್ ಅದಾನಿಯವರ ವ್ಯವಹಾರ ಕುರಿತು ಸಂಸತ್ತಿನಲ್ಲಿ ಕಳೆದ ತಿಂಗಳು ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಸಾಕಷ್ಟು ಗದ್ದಲ-ಕೋಲಾಹಲಗಳು ನಡೆದಿದ್ದವು. ಕಲಾಪಗಳು ಸರಿಯಾಗಿ ನಡೆದಿರಲಿಲ್ಲ.
Published: 15th March 2023 12:27 PM | Last Updated: 15th March 2023 12:43 PM | A+A A-

ದೆಹಲಿಯಲ್ಲಿ ವಿರೋಧ ಪಕ್ಷದ ನಾಯಕರ ಪ್ರತಿಭಟನಾ ಮೆರವಣಿಗೆಗೆ ಮುಂಚಿತವಾಗಿ ಸಂಸತ್ತಿನ ಬಳಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ
ನವದೆಹಲಿ: ಅದಾನಿ ಗ್ರೂಪ್ ಷೇರುಗಳ ಇಳಿಕೆ, ಹಿಂಡನ್ ಬರ್ಗ್ ವರದಿ, ಗೌತಮ್ ಅದಾನಿಯವರ ವ್ಯವಹಾರ ಕುರಿತು ಸಂಸತ್ತಿನಲ್ಲಿ ಕಳೆದ ತಿಂಗಳು ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಸಾಕಷ್ಟು ಗದ್ದಲ-ಕೋಲಾಹಲಗಳು ನಡೆದಿದ್ದವು. ಕಲಾಪಗಳು ಸರಿಯಾಗಿ ನಡೆದಿರಲಿಲ್ಲ.
ಈಗ ಮತ್ತೆ ಸಂಸತ್ತು ಕಲಾಪ ಪುನರಾರಂಭವಾಗಿದ್ದು ಅದಾನಿ ಗ್ರೂಪ್ ವಿಚಾರ ಮತ್ತು ರಾಹುಲ್ ಗಾಂಧಿ ಇಂಗ್ಲೆಂಡಿನಲ್ಲಿ ಹೋಗಿ ಭಾರತದಲ್ಲಿ ಪ್ರಜಾಪ್ರಭುತ್ವ ಸಾವಿನ ಹಂತಕ್ಕೆ ತಲುಪಿದೆ ಎಂದು ಹೇಳಿರುವುದು ಮತ್ತಷ್ಟು ಗದ್ದಲಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ದೇಶದ ಮುಂದೆ ಕ್ಷಮೆಯಾಚಿಸಬೇಕೆಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸುತ್ತಿದ್ದಾರೆ.
ಈ ಮಧ್ಯೆ ಇಂದು ಹಲವು ವಿರೋಧ ಪಕ್ಷಗಳ ನಾಯಕರು ಸಂಸತ್ ಭವನದಿಂದ ಜಾರಿ ನಿರ್ದೇಶನಾಲಯದ ಕಚೇರಿವರೆಗೆ(ED) ಪ್ರತಿಭಟನಾ ಮೆರವಣಿಗೆ ನಡೆಸಿ ಅದಾನಿ ವಿಚಾರವಾಗಿ ತನಿಖಾ ಸಂಸ್ಥೆಗೆ ದೂರು ನೀಡಲಿದ್ದಾರೆ.
ಈ ವಿಷಯದ ಕುರಿತು ಜಂಟಿ ಕಾರ್ಯತಂತ್ರವನ್ನು ಸಂಘಟಿಸಲು ನಾಯಕರು ಸಂಸತ್ ಭವನದ ಸಂಕೀರ್ಣದಲ್ಲಿರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ನಡೆಸಿದರು. ಸಂಸತ್ ಭವನದಿಂದ ಈಗ ಮಧ್ಯಾಹ್ನ 12:30ಕ್ಕೆ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದ್ದು, ಹಲವು ವಿರೋಧ ಪಕ್ಷಗಳ ಸಂಸದರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
#WATCH | Delhi: Opposition MPs, gather for a meeting at Rajya Sabha LoP and Congress president Mallikarjun Kharge's Parliament chamber over the Adani Group issue. pic.twitter.com/MHu9cLZkOA
— ANI (@ANI) March 15, 2023
ಅದಾನಿ-ಹಿಂಡೆನ್‌ಬರ್ಗ್ ಸಮಸ್ಯೆಯ ಕುರಿತು ಜಂಟಿ ಸಂಸದೀಯ ಸಮಿತಿ (JPC) ತನಿಖೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ತಮ್ಮ ಬೇಡಿಕೆಯ ಮೇಲೆ ಸಂಸತ್ತಿನ ಕಲಾಪಗಳನ್ನು ಸ್ಥಗಿತಗೊಳಿಸುತ್ತಿವೆ.
ಅಮೆರಿಕ ಮೂಲದ ಕಿರು ಮಾರಾಟಗಾರ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಸಮೂಹವು "ಲಜ್ಜೆಯ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆಯಲ್ಲಿ ತೊಡಗಿದೆ" ಎಂದು ಆರೋಪಿಸಿದೆ ಮತ್ತು ಸ್ಟಾಕ್ ಬೆಲೆಗಳನ್ನು ಹೆಚ್ಚಿಸಲು ಕಡಲಾಚೆಯ ಶೆಲ್ ಕಂಪನಿಗಳನ್ನು ಬಳಸಿತ್ತು ಎಂದು ವರದಿಯಲ್ಲಿ ಆರೋಪಿಸಿತ್ತು.
ಅದಾನಿ ಗ್ರೂಪ್ ಆರೋಪಗಳನ್ನು ನಿರಾಕರಿಸಿದೆ, ಅವುಗಳನ್ನು "ದುರುದ್ದೇಶಪೂರಿತ", "ಆಧಾರರಹಿತ" ಮತ್ತು "ಭಾರತದ ಮೇಲಿನ ಲೆಕ್ಕಾಚಾರದ ದಾಳಿ" ಎಂದು ಕರೆದಿದೆ.
ತೃಣಮೂಲ ಕಾಂಗ್ರೆಸ್ ಪ್ರತಿಭಟನೆ: ತೃಣಮೂಲ ಕಾಂಗ್ರೆಸ್ ಪ್ರತ್ಯೇಕವಾಗಿ ಸಂಸತ್ತಿನ ಸಂಕೀರ್ಣದ ಗಾಂಧಿ ಪ್ರತಿಮೆಯ ಮುಂದೆ ಎಲ್‌ಪಿಜಿ ಬೆಲೆ ಏರಿಕೆಯ ಬಗ್ಗೆ ಪ್ರತಿಭಟನೆ ನಡೆಸಿತು ಮತ್ತು ಸರ್ಕಾರದಿಂದ ಉತ್ತರಕ್ಕಾಗಿ ಒತ್ತಾಯಿಸಿತು.
ಎಲ್‌ಪಿಜಿ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಟಿಎಂಸಿ ಸಂಸದರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಅದಾನಿ ವಿಚಾರದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಅದಾನಿ ಗ್ರೂಪ್ ಮತ್ತು ವಿದ್ಯುತ್ ಉಪಕರಣಗಳ ಆಮದುಗಳ ತನಿಖೆಯನ್ನು ಪೂರ್ಣಗೊಳಿಸಲು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) "ಎಂಟು ವರ್ಷಗಳಿಗಿಂತ ಹೆಚ್ಚು ಸಮಯ ಏಕೆ ತೆಗೆದುಕೊಂಡಿದೆ ಎಂದು ನಿನ್ನೆ ಪ್ರಶ್ನಿಸಿದೆ. ಅದರ ವರದಿಯ ವಿಷಯಗಳನ್ನು ಸಾರ್ವಜನಿಕಗೊಳಿಸಲಾಗುತ್ತದೆಯೇ ಎಂದು ಕೇಳಿದೆ.