ಪ್ರತಿಭಟನೆ ವೇಳೆ ಬುಡಕಟ್ಟು ಯುವತಿ ಸಾವಿನ ವಿಚಾರವಾಗಿ ಪ್ರತಿಭಟನೆ: ಓರ್ವ ಯುವಕ ಸಾವು, ತನಿಖೆಗೆ ಸಿಎಂ ಚೌಹಾಣ್ ಆದೇಶ

ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ  ದೊಂಗರ್‌ಗಾವ್‌ನಲ್ಲಿ ಪ್ರತಿಭಟನಾಕಾರರ ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಮತ್ತು ಅಶ್ರುವಾಯು ಪ್ರಯೋಗಿಸಿದ್ದರಿಂದ 18 ವರ್ಷದ ಬುಡಕಟ್ಟು ಯುವಕ ಗುರುವಾರ ಸಾವನ್ನಪ್ಪಿದ್ದಾನೆ.  ಮೃತ ವ್ಯಕ್ತಿಯನ್ನು ಭೇರುಲಾಲ್ (18) ಎಂದು ಗುರುತಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಂದೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ  ದೊಂಗರ್‌ಗಾವ್‌ನಲ್ಲಿ ಪ್ರತಿಭಟನಾಕಾರರ ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಮತ್ತು ಅಶ್ರುವಾಯು ಪ್ರಯೋಗಿಸಿದ್ದರಿಂದ 18 ವರ್ಷದ ಬುಡಕಟ್ಟು ಯುವಕ ಗುರುವಾರ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಭೇರುಲಾಲ್ (18) ಎಂದು ಗುರುತಿಸಲಾಗಿದೆ.

ಮೃತನ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲಾಗಿದ್ದು, ಬಿಗಿ ಭದ್ರತೆಯ ನಡುವೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಇಂದೋರ್ ಜಿಲ್ಲಾಧಿಕಾರಿ ಟಿ ಇಳಯರಾಜ ತಿಳಿಸಿದ್ದಾರೆ. ಜಿಲ್ಲೆಯ ದೊಂಗರ್‌ಗಾವ್  ಗ್ರಾಮದಲ್ಲಿ ಬುಧವಾರ 22 ವರ್ಷದ ಯುವತಿ ಸಾವನ್ನಪ್ಪಿದ್ದ ನಂತರ ಪ್ರತಿಭಟನೆ ನಡೆಸಲಾಗಿತ್ತು.  ಪರಿಸ್ಥಿತಿಯನ್ನು ತಿಳಿಗೊಳಿಸಲು ಇಂದೋರ್ ನ ಐದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಗುರುವಾರ ಸೆಕ್ಷನ್ 144 ಜಾರಿಗೊಳಿಸಿದೆ. 

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ 23 ವರ್ಷದ ಬುಡಕಟ್ಟು ಯುವತಿ ಬಾಡಿಗೆ ಕೊಠಡಿಯೊಂದಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಳು. ಈ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದ್ದು, ಆರೋಪಿಯನ್ನು ತಮ್ಮ  ವಶಕ್ಕೆ ನೀಡಬೇಕೆಂದು ಆಗ್ರಹಿಸಿ ಮೃತ ಯುವತಿಯ ಕುಟುಂಬಸ್ಥರು ಶವವನ್ನು ಪೊಲೀಸ್ ಔಟ್ ಪೋಸ್ಟ್  ಹೊರಗಡೆ ಇಟ್ಟು ಪ್ರತಿಭಟನೆ ನಡೆಸಿದ್ದು, ಕಲ್ಲು ತೂರಾಟ ನಡೆಸಲಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಪ್ರಯೋಗಿಸಿದ್ದರು.

ಇದಕ್ಕೂ ಮುನ್ನಾ ಪಾಟಿದಾರ್ ಸಮುದಾಯದ ವ್ಯಕ್ತಿಯೊಂದಿಗೆ ಯುವತಿ ವಾಸಿಸುತ್ತಿದ್ದಳು, ಆತ ಆಕೆಯನ್ನು ತನ್ನ ಹೆಂಡತಿ ಎಂದು ಹೇಳಿಕೊಂಡಿದ್ದ ಎಂದು ಎಸ್ ಪಿ ಭಗವತ್ ಸಿಂಗ್ ವಿರ್ಡೆ ಹೇಳಿದ್ದರು. ಆದರೆ, ಆ ಹೇಳಿಕೆಯನ್ನು ಕವಿತಾ ಕುಟುಂಬ ಸದಸ್ಯರು ನಿರಾಕರಿಸಿದ್ದು, ವಿದ್ಯುತ್ ತಗುಲಿಸಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಉದ್ರಿಕ್ತ ಪ್ರತಿಭಟನಾಕಾರರು ಪೊಲೀಸ್ ಔಟ್ ಪೋಸ್ಟ್ ಮೇಲೆ ಕಲ್ಲು ತೂರಾಟ ನಡೆದಾಗ ಪೊಲೀಸರು ತಮ್ಮ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಬುಡಕಟ್ಟು ಯುವಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಐಜಿಪಿ ರಾಕೇಶ್ ಗುಪ್ತಾ ತಿಳಿಸಿದ್ದಾರೆ. ಈ ಮಧ್ಯೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಆದೇಶಿಸಿದ್ದಾರೆ. ಈ ಕುರಿತು ಬುಡಕಟ್ಟು ಸಮುದಾಯ ಶಾಸಕ ಕಾತಿಲಾಲ್ ಬುರಿಯಾ ಅವರನ್ನೊಳಗೊಂಡ ತಂಡ ತನಿಖೆ ನಡೆಸಲಿದೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಮಲ್ ನಾಥ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com