ಫಡ್ನವಿಸ್ ಪತ್ನಿಗೆ ಬ್ಲಾಕ್ ಮೇಲ್ ಆರೋಪ: ಡಿಸೈನರ್ ಅನಿಕ್ಷಾ ತಂದೆ ಅನಿಲ್ ಜೈಸಿಂಘಾನಿ ಬಂಧನ!

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರಿಗೆ ಬೆದರಿಕೆ ಮತ್ತು ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ ಬುಕ್ಕಿ ಅನಿಲ್ ಜೈಸಿಂಘಾನಿ ಅವರನ್ನು ಬಂಧಿಸಲಾಗಿದೆ. ಅನಿಲ್‌ನನ್ನು ಮುಂಬೈ ಪೊಲೀಸರು ಗುಜರಾತ್‌ ನಲ್ಲಿ ಬಂಧಿಸಿದ್ದಾರೆ.
ಅಮೃತಾ ಫಡ್ನವೀಸ್-ಅನಿಲ್
ಅಮೃತಾ ಫಡ್ನವೀಸ್-ಅನಿಲ್

ಅಹಮದಾಬಾದ್: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರಿಗೆ ಬೆದರಿಕೆ ಮತ್ತು ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ ಬುಕ್ಕಿ ಅನಿಲ್ ಜೈಸಿಂಘಾನಿ ಅವರನ್ನು ಬಂಧಿಸಲಾಗಿದೆ. ಅನಿಲ್‌ನನ್ನು ಮುಂಬೈ ಪೊಲೀಸರು ಗುಜರಾತ್‌ ನಲ್ಲಿ ಬಂಧಿಸಿದ್ದಾರೆ. 

ಅಮೃತಾ ಫಡ್ನವಿಸ್ ಅವರು ಡಿಸೈನರ್ ಅನಿಕ್ಷಾ ಮತ್ತು ಆಕೆಯ ತಂದೆ ಅನಿಲ್ ಜೈಸಿಂಘಾನಿ ವಿರುದ್ಧ ಬ್ಲಾಕ್ ಮೇಲ್ ಮತ್ತು ಬೆದರಿಕೆ ಆರೋಪದ ಸಂಬಂಧ ಪ್ರಕರಣ ದಾಖಲಿಸಿದ್ದರು. ಅನಿಕ್ಷಾಳನ್ನು ಈಗಾಗಲೇ ಬಂಧಿಸಲಾಗಿದೆ.

ಏನು ವಿಷಯ?
ಡಿಸೈನರ್ ಅನಿಕ್ಷಾ ಜೈಸಿಂಘನಿ ಮತ್ತು ಆಕೆಯ ತಂದೆ ಅನಿಲ್ ವಿರುದ್ಧ ಅಮೃತಾ ಫಡ್ನವಿಸ್ ಅವರು ಕಳೆದ ತಿಂಗಳು 20ರಂದು ಮಲಬಾರ್ ಹಿಲ್ ಸ್ಟೇಷನ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಅನಿಕ್ಷಾ ತನ್ನ ತಂದೆಯೊಂದಿಗೆ ಸೇರಿಕೊಂಡು ಬೆದರಿಕೆ ಹಾಕಿದ್ದಾರೆ. ಅಲ್ಲದೆ ತನ್ನ ವಿರುದ್ಧ ಸಂಚು ರೂಪಿಸಿದ್ದಾರೆ ಎಂದು ಅಮೃತಾ ಫಡ್ನವಿಸ್ ಆರೋಪಿಸಿದ್ದರು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದರು. ಅನಿಕ್ಷಾ ಮೊದಲು ಅಮೃತಾರ ವಿಶ್ವಾಸ ಗಳಿಸಿಕೊಂಡಳು. ನಂತರ ಅನಿಕ್ಷಾ ಅಮೃತಾಗೆ ತನ್ನ ತಂದೆಯ ಬಗ್ಗೆ ತಿಳಿಸಿದ್ದಾಳೆ. ತನ್ನ ತಂದೆಯನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ ಎಂದು ತಿಳಿಸಿದ್ದಾಳೆ. ಅಲ್ಲದೆ ಈ ವಿಚಾರದಲ್ಲಿ ಸಹಾಯ ಮಾಡುವಂತೆ ಅಮೃತಾಳನ್ನು ಕೋರಿದ್ದಳು.

ಸಹಾಯ ಮಾಡಿದರೆ 1 ಕೋಟಿ ರೂಪಾಯಿ ನೀಡುವುದಾಗಿ ಅನಿಕ್ಷಾ ಅಮೃತಾಗೆ ಆಮಿಷ ನೀಡಿದ್ದಳು ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಒಂದು ವೇಳೆ ಇದನ್ನು ನಿರಾಕರಿಸಿದರೆ ತನ್ನ ಪತಿ ದೇವೇಂದ್ರ ಫಡ್ನವೀಸ್ ನನ್ನು ಸಿಲುಕಿಸುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಳು. ಹಲವು ನಕಲಿ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳನ್ನು ಕಳುಹಿಸಿ ಅಮೃತಾ ಅವರನ್ನು ಬ್ಲಾಕ್‌ಮೇಲ್ ಮಾಡಲು ಅನಿಕ್ಷಾ ಯತ್ನಿಸಿದ್ದಳು ಎಂದು ಹೇಳಿದ್ದಾರೆ. 

ಅನಿಲ್ ಜೈಸಿಂಘಾನಿ ಯಾರು?
ಅನಿಲ್ ಜೈಸಿಂಘಾನಿ ಪ್ರಸಿದ್ಧ ಬುಕ್ಕಿ. ಈತ ಉಲ್ಲಾಸನಗರ ನಿವಾಸಿ. ಈತನ ವಿರುದ್ಧ 5 ರಾಜ್ಯಗಳಲ್ಲಿ 17 ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲ ಸುಮಾರು 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಅನಿಲ್ ಬೆಟ್ಟಿಂಗ್ ಪ್ರಕರಣಗಳಲ್ಲಿ ಮೂರು ಬಾರಿ ಬಂಧನಕ್ಕೊಳಗಾಗಿದ್ದಾನೆ. ಈತನ ವಿರುದ್ಧ ಒಟ್ಟು 17 ಪ್ರಕರಣಗಳು ದಾಖಲಾಗಿವೆ. 2019ರ ಮೇ 11ರಂದು ಗೋವಾ ಪೊಲೀಸರು ಆತನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದರು.

ಸುಮಾರು ಎಂಟು ವರ್ಷಗಳ ಹಿಂದೆ ಮೇ 2015ರಲ್ಲಿ, ಗುಜರಾತ್ ಜಾರಿ ನಿರ್ದೇಶನಾಲಯ (ಇಡಿ) ಜೈಸಿಂಘಾನಿಯ ಎರಡು ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮ ಹಣ ವರ್ಗಾವಣೆಯ ಅಡಿಯಲ್ಲಿ ಪ್ರಕರಣ ದಾಖಲಿಸಿತು. ಈ ವೇಳೆ ಅನಾರೋಗ್ಯದ ಕಾರಣ ನೀಡಿ ಪರಾರಿಯಾಗಿದ್ದನು. ಇದಾದ ಬಳಿಕ ಆತನ ವಿರುದ್ಧ ಮುಂಬೈನ ಎರಡು ಪೊಲೀಸ್ ಠಾಣೆಗಳಲ್ಲಿ ವಂಚನೆ ಮತ್ತು ಫೋರ್ಜರಿ ಪ್ರಕರಣಗಳು ದಾಖಲಾಗಿದ್ದವು. ಇಷ್ಟೇ ಅಲ್ಲ, ಜೈಸಿಂಘಾನಿ ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತೆಯ (ಎಸಿಎಸ್‌ಯು) ರಾಡಾರ್‌ನಲ್ಲಿದ್ದಾರೆ, ಅವರು ಆರಂಭದಲ್ಲಿ ಉಲ್ಲಾಸ್‌ನಗರದಲ್ಲಿ ಕ್ರಿಕೆಟ್ ಬುಕ್ಕಿಯಾಗಿ ಕೆಲಸ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com