ರಾಹುಲ್ ಗಾಂಧಿ ನಾಳೆ ಲೋಕಸಭೆಯಲ್ಲಿ ಮಾತನಾಡಲು ಸಮಯ ಕೇಳಿದ್ದೇವೆ: ಮಲ್ಲಿಕಾರ್ಜುನ ಖರ್ಗೆ
ಮಂಗಳವಾರ ಲೋಕಸಭೆಯಲ್ಲಿ ಮಾತನಾಡಲು ರಾಹುಲ್ ಗಾಂಧಿಗೆ ಸಮಯ ಕೇಳಲಾಗಿದ್ದು, ಅವಕಾಶ ನೀಡಿದರೆ ಅವರು ಹೇಳಿಕೆ ನೀಡುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
Published: 20th March 2023 12:28 PM | Last Updated: 20th March 2023 12:28 PM | A+A A-

ಮಲ್ಲಿಕಾರ್ಜನ ಖರ್ಗೆ
ನವದೆಹಲಿ: ಮಂಗಳವಾರ ಲೋಕಸಭೆಯಲ್ಲಿ ಮಾತನಾಡಲು ರಾಹುಲ್ ಗಾಂಧಿಗೆ ಸಮಯ ಕೇಳಲಾಗಿದ್ದು, ಅವಕಾಶ ನೀಡಿದರೆ ಅವರು ಹೇಳಿಕೆ ನೀಡುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆಯ ವೇಳೆ ನೀಡಿದ 'ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ' ಎಂಬ ಹೇಳಿಕೆಯ ಬಗ್ಗೆ ವಿಚಾರಿಸಲು ದೆಹಲಿ ಪೊಲೀಸರ ತಂಡವು ಭಾನುವಾರ ರಾಹುಲ್ ಅವರ ನಿವಾಸಕ್ಕೆ ಆಗಮಿಸಿದ ಬಗ್ಗೆ ಖರ್ಗೆ ಬಿಜೆಪಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
'ಅವರು (ಬಿಜೆಪಿ) ನಾವು ಎತ್ತುತ್ತಿರುವ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಯಾತ್ರೆ ಮುಗಿದು 46 ದಿನಗಳಾಗಿದ್ದು, ಈಗ ಯಾರನ್ನು ಭೇಟಿ ಮಾಡಿದ್ದೀರಿ ಎಂದು ಕೇಳುತ್ತಿದ್ದಾರೆ. ಲಕ್ಷಾಂತರ ಜನರು ಯಾತ್ರೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಐದು ನಿಮಿಷಗಳ ಕಾಲ ಅವರನ್ನು (ಗಾಂಧಿ) ಭೇಟಿ ಮಾಡಿದ್ದಾರೆ. ಈಗ ಜನರನ್ನು ಗುರುತಿಸಲು ಕೇಳುತ್ತಿದ್ದಾರೆ' ಎಂದು ಖರ್ಗೆ ಅವರು ಸಂಸತ್ತಿಗೆ ತೆರಳುವ ಮೊದಲು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ರಾಹುಲ್ ಗಾಂಧಿಯವರು ಭಾಷಣವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಡಿದ್ದು, ಪೊಲೀಸರು ಅದರ ಬಗ್ಗೆ ಇಲ್ಲಿ ಕೇಳುತ್ತಿದ್ದಾರೆ. ಗುರಿಯಾಗಿಸಿಕೊಂಡು ಕಿರುಕುಳ ನೀಡುವ ಪ್ರಯತ್ನ ಇದಾಗಿದೆ. ಅವರು ನಮ್ಮನ್ನು ಬೆದರಿಸುವ ಮೂಲಕ ದುರ್ಬಲಗೊಳಿಸಲು ಬಯಸುತ್ತಾರೆ. ಆದರೆ, ನಾವು ಹೆದರುವುದಿಲ್ಲ ಅಥವಾ ದುರ್ಬಲರಾಗುವುದಿಲ್ಲ ಎಂದು ಖರ್ಗೆ ಹೇಳಿದರು.
ಇದನ್ನೂ ಓದಿ: ಲಂಡನ್‌ನಲ್ಲಿ ಹೇಳಿಕೆ: ಸಭಾಪತಿ ಅವಕಾಶ ನೀಡಿದರೆ ಸಂಸತ್ತಿನಲ್ಲಿ ಮಾತನಾಡುತ್ತೇನೆ- ರಾಹುಲ್ ಗಾಂಧಿ
ಗಾಂಧಿ ಸಂಸತ್ತಿನಲ್ಲಿ ಮಾತನಾಡುವರೇ ಎಂಬ ಪ್ರಶ್ನೆಗೆ, ‘ನಾಳೆ (ಮಂಗಳವಾರ) ಸಮಯಾವಕಾಶ ಕೇಳಿದ್ದೇವೆ. ಅವಕಾಶ ನೀಡಿದರೆ ಅವರು (ರಾಹುಲ್ ಗಾಂಧಿ) ಸಂಸತ್ತಿನಲ್ಲಿ ಮಾತನಾಡುತ್ತಾರೆ. ಅದಕ್ಕಾಗಿ ನಾವು ಪ್ರಯತ್ನಿಸುತ್ತಿದ್ದೇವೆ. ಇದುವೇ ಸಮಸ್ಯೆ, ಪ್ರಜಾಪ್ರಭುತ್ವದಲ್ಲಿ ನಮಗೆ ಮಾತನಾಡಲು ಸಹ ಅವಕಾಶವಿಲ್ಲ. ಮೈಕ್‌ಗಳನ್ನು ಸ್ವಿಚ್ ಆಫ್ ಮಾಡಲಾಗುತ್ತದೆ ಮತ್ತು ನಾವು ಇದನ್ನು ಹೇಳಿದಾಗ ಅವರು ಆರೋಪ ಮಾಡುತ್ತಾರೆ ಎಂದು ಹೇಳಿದರು.
ಒಬ್ಬ ವ್ಯಕ್ತಿಯು ತನ್ನ ವೈಯಕ್ತಿಕ ವಿವರಣೆಯನ್ನು ನೀಡಲು ಬಯಸುತ್ತಿರುವುದನ್ನು ನೀವು ನೋಡಬಹುದು. ಆದರೆ, ಅವರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಅವರು ತಿಳಿಸಿದರು.
ರಾಹುಲ್ ಗಾಂಧಿ ಸೋಮವಾರ ಕರ್ನಾಟಕಕ್ಕೆ ಪ್ರಯಾಣ ಬೆಳೆಸಲಿದ್ದು, ಮಧ್ಯಾಹ್ನ ಬೆಳಗಾವಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬ್ರಿಟನ್‌ನಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಪಟ್ಟುಹಿಡಿದಿದ್ದರೆ, ಕಾಂಗ್ರೆಸ್, ಬಿಜೆಪಿಯ ಆರೋಪವನ್ನು ತಿರಸ್ಕರಿಸಿದೆ. ಅದಾನಿ ವಿಷಯದಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ತನ್ನ ಹೇಳಿಕೆಗಳನ್ನು ತಪ್ಪಾಗಿ ಬಿಂಬಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮಾರ್ಚ್ 13 ರಂದು ಆರಂಭವಾದ ಸಂಸತ್ತಿನ ಬಜೆಟ್ ಅಧಿವೇಶನವು ಇದೇ ವಿಚಾರವಾಗಿ ಮುಂದೂಡುತ್ತಲೇ ಬಂದಿದೆ.
ಯುಕೆಯಲ್ಲಿ ತಮ್ಮ ಸಂವಾದದ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅವರು ಭಾರತೀಯ ಪ್ರಜಾಪ್ರಭುತ್ವದ ರಚನೆಗಳು ದಾಳಿಗೆ ಒಳಗಾಗಿವೆ ಮತ್ತು ದೇಶದ ಸಂಸ್ಥೆಗಳ ಮೇಲೆ 'ಪೂರ್ಣ ಪ್ರಮಾಣದ ಆಕ್ರಮಣ' ನಡೆಯುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ಲಂಡನ್ ಭಾಷಣ ಅನುಮೋದಿಸಿದ ಗೋವಾ ಕಾಂಗ್ರೆಸ್ ಸಂಸದೀಯ ವ್ಯವಹಾರಗಳ ಸಮಿತಿ
ಗಾಂಧಿಯವರ ಟೀಕೆಗಳು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಅವರು ವಿದೇಶಿ ನೆಲದಲ್ಲಿ ಭಾರತವನ್ನು ಕೆಣಕುತ್ತಿದ್ದಾರೆ ಮತ್ತು ವಿದೇಶಿ ಹಸ್ತಕ್ಷೇಪಗಳನ್ನು ಬಯಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಆಂತರಿಕ ರಾಜಕೀಯವನ್ನು ಎತ್ತುವ ಉದಾಹರಣೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಆಡಳಿತ ಪಕ್ಷಕ್ಕೆ ತಿರುಗೇಟು ನೀಡಿದೆ.