ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು: ಸಂಯುಕ್ತ ಕಿಸಾನ್ ಮೋರ್ಚಾ
ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಕಾನೂನು, ಸಾಲಮನ್ನಾ ಮತ್ತು ಪಿಂಚಣಿ ಸೇರಿದಂತೆ ತನ್ನ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಮತ್ತೊಂದು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಹೇಳಿದೆ.
Published: 20th March 2023 03:29 PM | Last Updated: 20th March 2023 03:29 PM | A+A A-

ದೆಹಲಿಯ ರಾಮಲೀಲಾ ಮೈದಾನದಲ್ಲಿ 'ಕಿಸಾನ್ ಮಹಾಪಂಚಾಯತ್' ಸಂದರ್ಭದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ರೈತರು.
ನವದೆಹಲಿ: ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಕಾನೂನು, ಸಾಲಮನ್ನಾ ಮತ್ತು ಪಿಂಚಣಿ ಸೇರಿದಂತೆ ತನ್ನ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಮತ್ತೊಂದು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಹೇಳಿದೆ.
15 ಸದಸ್ಯರ ಎಸ್‌ಕೆಎಂ ನಿಯೋಗವು ಕೃಷಿ ಭವನದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಮಧ್ಯಾಹ್ನ ಭೇಟಿ ಮಾಡಿ ಬೇಡಿಕೆ ಪತ್ರ ಸಲ್ಲಿಸಿತು ಎಂದು ರೈತ ಮುಖಂಡ ದರ್ಶನ್ ಪಾಲ್ ತಿಳಿಸಿದರು.
'ಹಲವಾರು ಬಗೆಹರಿಯದ ಸಮಸ್ಯೆಗಳಿವೆ ಮತ್ತು ಇವುಗಳು ಮತ್ತೊಂದು 'ಆಂದೋಲನ'ವನ್ನು ಬಯಸುತ್ತವೆ. ಏಪ್ರಿಲ್ 30ರಂದು ದೆಹಲಿಯಲ್ಲಿ ಮತ್ತೊಂದು ಸಭೆ ಕರೆಯುತ್ತೇವೆ. ಸಭೆಯ ಪೂರ್ವಭಾವಿಯಾಗಿ ಎಲ್ಲಾ ರೈತ ಸಂಘಗಳು ತಮ್ಮ ರಾಜ್ಯಗಳಲ್ಲಿ ರ‍್ಯಾಲಿಗಳನ್ನು ಕೈಗೊಳ್ಳಲು ಮತ್ತು ಪಂಚಾಯಿತಿಗಳನ್ನು ನಡೆಸಲು ನಾನು ಕೇಳುತ್ತೇನೆ' ಎಂದು ಅವರು ಇಲ್ಲಿನ ರಮಿಲಾ ಮೈದಾನದಲ್ಲಿ ನೆರೆದ ರೈತರನ್ನು ಉದ್ದೇಶಿಸಿ ಹೇಳಿದರು.
'ನಾವು ಪ್ರತಿದಿನ ಪ್ರತಿಭಟನೆ ಮಾಡಲು ಬಯಸುವುದಿಲ್ಲ. ಆದರೆ, ನಾವು ಹಾಗೆ ಮಾಡುವಂತೆ ಒತ್ತಾಯಿಸಲಾಗುತ್ತದೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಕಿವಿಗೊಡದಿದ್ದರೆ, ರೈತ ಕಾನೂನುಗಳ ವಿರುದ್ಧದ ಪ್ರತಿಭಟನೆಗಿಂತ ದೊಡ್ಡದಾದ ಮತ್ತೊಂದು ಆಂದೋಲನವನ್ನು ಪ್ರಾರಂಭಿಸುತ್ತೇವೆ' ಎಂದು ಅವರು ಹೇಳಿದರು.
ಎಂಎಸ್‌ಪಿ ಕಾನೂನು, ಸಂಪೂರ್ಣ ಸಾಲ ಮನ್ನಾ, ಪಿಂಚಣಿ, ಬೆಳೆ ವಿಮೆ, ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಈಗ ರದ್ದಾದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳು ಸೇರಿವೆ ಎಂದು ಪಾಲ್ ಹೇಳಿದರು.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಿ ಜೈಲಿಗೆ ಹಾಕಬೇಕು. ಆಲಿಕಲ್ಲು ಚಂಡಮಾರುತ ಮತ್ತು ಅಕಾಲಿಕ ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ರೈತರಿಗೆ ವಿದ್ಯುತ್ ಸಬ್ಸಿಡಿಯನ್ನು ವಿದ್ಯುತ್ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಆಲಿಕಲ್ಲು ಹಾಗೂ ಅಕಾಲಿಕ ಮಳೆಯಿಂದ ಬೆಳೆ ಹಾನಿಗೆ ಪರಿಹಾರ ನೀಡಲು ಸರ್ಕಾರ ಈಗಾಗಲೇ ನಿರ್ದೇಶನ ನೀಡಿದೆ ಎಂದು ತೋಮರ್ ನಿಯೋಗಕ್ಕೆ ತಿಳಿಸಿದರು. ಈ ಬೇಡಿಕೆಯನ್ನು ಈಗಾಗಲೇ ಈಡೇರಿಸಲಾಗಿದೆ. ಇದು ಎಸ್‌ಕೆಎಂಗೆ ದೊಡ್ಡ ಗೆಲುವು ಎಂದು ಅವರು ಹೇಳಿದರು.
ಎಂಎಸ್‌ಪಿಗೆ ಕಾನೂನಾತ್ಮಕ ಗ್ಯಾರಂಟಿ ನೀಡುವ ಬಗ್ಗೆಯೂ ನಾವು ಸಚಿವರೊಂದಿಗೆ ಚರ್ಚಿಸಿದ್ದೇವೆ. ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆದು ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ತಾವೇ ಖುದ್ದಾಗಿ ಮಧ್ಯಪ್ರವೇಶಿಸುವುದಾಗಿ ತೋಮರ್ ಹೇಳಿದ್ದಾರೆ ಎಂದರು.