ಸುಮಾರು ಐವತ್ತು ವರ್ಷಗಳ ನಂತರ, ಅನರ್ಹತೆಯೊಂದಿಗೆ ಅಜ್ಜಿ ಇಂದಿರಾ ಹೆಜ್ಜೆ ಅನುಸರಿಸಿದ ರಾಹುಲ್!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದು ಅವರ ಕುಟುಂಬ ಸದಸ್ಯರಲ್ಲಿ ಇದು ಮೊದಲೇನಲ್ಲಾ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದು ಅವರ ಕುಟುಂಬ ಸದಸ್ಯರಲ್ಲಿ ಇದು ಮೊದಲೇನಲ್ಲಾ, ಸುಮಾರು ಐದು ದಶಕಗಳ ಹಿಂದೆ ಅವರ ಅಜ್ಜಿ ಮತ್ತು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು 1971 ರ ಸಾರ್ವತ್ರಿಕ ಚುನಾವಣೆಯಲ್ಲಿ  ಅಕ್ರಮದಲ್ಲಿ ಅಪರಾಧಿ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ತೀರ್ಪು ನೀಡಿದ ನಂತರ ತಮ್ಮ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡಿದ್ದರು.

ರಾಯ್ ಬರೇಲಿಯಲ್ಲಿ ಇಂದಿರಾ ಗಾಂಧಿ ಸೋಲಿಸಿದ್ದ  ರಾಜ್ ನಾರಾಯಣ್ ಅವರು ಚುನಾವಣೆಯಲ್ಲಿ ಗೆಲ್ಲಲು ಅಕ್ರಮ ಮಾರ್ಗ ಬಳಸಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ನಂತರ ಜೂನ್ 12, 1975 ರಂದು ಮಹತ್ವದ ಹೈಕೋರ್ಟ್ ತೀರ್ಪು ಬಂದಿತು. ಮೊದಲ ಬಾರಿಗೆ ಹಾಲಿ ಭಾರತೀಯ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಸ್ವತಃ ಹೈಕೋರ್ಟ್‌ನಲ್ಲಿ ಅಡ್ಡ ಪರೀಕ್ಷೆಗೆ ಒಳಗಾಗಿದ್ದರು.

ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಸರ್ಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಪ್ರಧಾನಿ ತಪ್ಪಿತಸ್ಥರು ಎಂದು ತೀರ್ಪು ನೀಡಿದರು. ಹೈಕೋರ್ಟ್ ಆಕೆಯನ್ನು ಲೋಕಸಭೆಗೆ ಆಯ್ಕೆ ಮಾಡುವುದನ್ನು ಬದಿಗಿಟ್ಟಿದ್ದಲ್ಲದೆ ಮುಂದಿನ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಿದೆ.

ಇಂದಿರಾಗಾಂಧಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪನ್ನು ಪ್ರಶ್ನಿಸಿದಾಗ, ನ್ಯಾಯಮೂರ್ತಿ ವಿಆರ್ ಕೃಷ್ಣಯ್ಯರ್ ಅವರು ಜೂನ್ 24 ರಂದು ತೀರ್ಪನ್ನು ಎತ್ತಿಹಿಡಿದರು, ನಂತರ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಪ್ರತಿಭಟನೆಗೆ ಕರೆ ನೀಡಿ, ದೆಹಲಿಯಲ್ಲಿ ಬೃಹತ್ ರ‍್ಯಾಲಿ ನಡೆಸಿದವು. ಇದರಿಂದ ಆತ್ಮವಿಶ್ವಾಸ ಕಳೆದುಕೊಂಡ ಇಂದಿರಾ ಗಾಂಧಿ  ಜೂನ್ 25 ರಂದು ತುರ್ತು ಪರಿಸ್ಥಿತಿಯನ್ನು ಘೋಷಿಸಲು ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರನ್ನು ಪ್ರೇರೇಪಿಸಿದರು. 

ತುರ್ತು ಪರಿಸ್ಥಿತಿಯನ್ನು ಎರಡು ಬಾರಿ ವಿಸ್ತರಿಸಿದ ನಂತರ ಇಂದಿರಾ ಗಾಂಧಿ ಅಂತಿಮವಾಗಿ 1977 ರಲ್ಲಿ ಸಾರ್ವತ್ರಿಕ ಚುನಾವಣೆಗೆ ಕರೆ ನೀಡಿದರು. ಅವರು ಮತ್ತೆ ರಾಯ್ ಬರೇಲಿಯಿಂದ ಕಣಕ್ಕಿಳಿದರು. ಆದರೆ  ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಅದೇ ರಾಜ್ ನಾರಾಯಣ್ ವಿರುದ್ಧ 50,000 ಮತಗಳಿಂದ ಸೋತರು.

ಸದ್ಯಕ್ಕೆ ಬರುವುದಾದರೆ, ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಯಾಗಿ ಎರಡು ದಿನ ಕಳೆದರೂ ರಾಹುಲ್ ಗಾಂಧಿ ಇನ್ನೂ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿಲ್ಲ. ಮೇಲ್ಮನವಿ ಸಲ್ಲಿಸಿದಾಗ ಅಜ್ಜಿಗಿಂತ ಭಿನ್ನವಾಗಿ ತಮ್ಮ ಅನರ್ಹತೆಯನ್ನು ರದ್ದು ಮಾಡಿಸಿಕೊಳ್ಳುತ್ತಾರೆಯೇ  ಎಂಬುದನ್ನು ನೋಡಬೇಕಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com