ವ್ಯಾಪಂ ಹಗರಣ ಬಯಲಿಗೆಳೆದಿದ್ದ ವೈದ್ಯಾಧಿಕಾರಿ ಡಾ. ಆನಂದ್ ರೈ ರಾಜ್ಯ ಸರ್ಕಾರಿ ಸೇವೆಯಿಂದ ವಜಾ
ದೇಶದಾದ್ಯಂತ ಭಾರಿ ಕೋಲಾಹಲ ಸೃಷ್ಟಿಸಿದ್ದ ವ್ಯಾಪಂ ಹಗರಣ ಬಯಲಿಗೆಳೆದಿದ್ದ ಮೂವರಲ್ಲಿ ಒಬ್ಬರಾದ ಮತ್ತು ಮಧ್ಯಪ್ರದೇಶ ಸರ್ಕಾರದಿಂದ ಅಮಾನತುಗೊಂಡಿದ್ದ ವೈದ್ಯಾಧಿಕಾರಿ ಡಾ.ಆನಂದ್ ರೈ ಅವರನ್ನು ಶಿವರಾಜ್ ಸಿಂಗ್ ಚೌಹಾಣ್....
Published: 28th March 2023 11:44 AM | Last Updated: 28th March 2023 06:54 PM | A+A A-

ಡಾ. ಆನಂದ್ ರೈ
ಭೋಪಾಲ್: ದೇಶದಾದ್ಯಂತ ಭಾರಿ ಕೋಲಾಹಲ ಸೃಷ್ಟಿಸಿದ್ದ ವ್ಯಾಪಂ ಹಗರಣ ಬಯಲಿಗೆಳೆದಿದ್ದ ಮೂವರಲ್ಲಿ ಒಬ್ಬರಾದ ಮತ್ತು ಮಧ್ಯಪ್ರದೇಶ ಸರ್ಕಾರದಿಂದ ಅಮಾನತುಗೊಂಡಿದ್ದ ವೈದ್ಯಾಧಿಕಾರಿ ಡಾ.ಆನಂದ್ ರೈ ಅವರನ್ನು ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಸರ್ಕಾರಿ ಅಧಿಸೂಚನೆ ಸೋಮವಾರ ತಿಳಿಸಿದೆ.
ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಅಧಿಕೃತ ಆದೇಶಗಳನ್ನು ಪಾಲಿಸದಿರುವುದು, ನಿಯಮಿತವಾಗಿ ಕರ್ತವ್ಯಕ್ಕೆ ಗೈರುಹಾಜರಾಗಿರುವುದು ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳಿಗೆ “ಕೆಟ್ಟ ಹೆಸರು” ತಂದ ಆರೋಪದ ಮೇಲೆ ಡಾ ರೈ ಅವರನ್ನು ನಾಗರಿಕ ಸೇವಾ ನಿಯಮಗಳ ನಿಬಂಧನೆಗಳ ಅಡಿಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ.
ಇದನ್ನು ಓದಿ: ವ್ಯಾಪಂ ಹಗರಣ: ಐವರಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ
ಇಲಾಖೆಯ ಆದೇಶದ ಪ್ರಕಾರ, ಇಂದೋರ್‌ನಲ್ಲಿ ನಾಲ್ಕು ಆರೋಗ್ಯ ರಕ್ಷಣಾ ಸೌಲಭ್ಯಗಳಾದ - ಸಿವಿಲ್ ಡಿಸ್ಪೆನ್ಸರಿ(ರೆಸಿಡೆನ್ಸಿ), ಹುಕುಮ್‌ಚಂದ್ ಆಸ್ಪತ್ರೆ, ಪಿಸಿ ಸೇಥಿ ಆಸ್ಪತ್ರೆ ಮತ್ತು ವೃಂದಾವನ ಕಾಲೋನಿಯಲ್ಲಿರುವ ಸಿವಿಲ್ ಡಿಸ್ಪೆನ್ಸರಿಯನ್ನು ಪರಿಶೀಲಿಸುವ ಕಾರ್ಯವನ್ನು ಡಾ. ರೈ ಅವರಿಗೆ ವಹಿಸಲಾಗಿತ್ತು. ಆದರೆ ಕಳೆದ ವರ್ಷ ಮಾರ್ಚ್ 29 ಮತ್ತು ಮಾರ್ಚ್ 30 ರಂದು ಅವರು ತಪಾಸಣೆಗೆ ಹೋಗದಿದ್ದರೂ, ಹಾಜರಾತಿ ನೋಂದಣಿಯಲ್ಲಿ ಅವರ ಹಾಜರಾತಿಯನ್ನು ಗುರುತಿಸಲಾಗಿದೆ ಎಂದು ತಿಳಿಸಲಾಗಿದೆ.
ಸೋಮವಾರ ಬಿಡುಗಡೆಯಾದ ಅಧಿಕೃತ ಅಧಿಸೂಚನೆಯ ಪ್ರಕಾರ, ವಿಚಾರಣೆಯ ಸಮಯದಲ್ಲಿ, ಅವರು (ರೈ) ಫೆಬ್ರವರಿ 15 ರಿಂದ ಮಾರ್ಚ್ 15, 2022 ರವರೆಗೆ ಕೇವಲ 18 ದಿನ ಕರ್ತವ್ಯ ನಿರ್ವಹಿಸಿರುವುದು ಕಂಡುಬಂದಿದೆ. ಆದರೆ ಉಳಿದ ದಿನಗಳಲ್ಲಿ ಕ್ಯಾಶುಯಲ್ ರಜೆ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಉಲ್ಲೇಖಿಸಲಾಗಿದೆ.