ಸಾರ್ವಜನಿಕ ಸ್ಥಳಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಹಾಕಿದ 8 ಆಪ್ ಕಾರ್ಯಕರ್ತರ ಬಂಧನ

ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಆಸ್ತಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ 'ಆಕ್ಷೇಪಾರ್ಹ ಘೋಷಣೆ' ಹಾಕಿದ್ದಕ್ಕಾಗಿ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಆಸ್ತಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ 'ಆಕ್ಷೇಪಾರ್ಹ ಘೋಷಣೆ'ಯಿರುವ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮಾರ್ಚ್ 30 ರಂದು ನಗರದ ವಿವಿಧ ಭಾಗಗಳಲ್ಲಿ 'ಮೋದಿ ಹಟಾವೋ ದೇಶ್ ಬಚಾವೋ' ಎಂಬ ಘೋಷಣೆಗಳಿರುವ ಪೋಸ್ಟರ್‌ಗಳನ್ನು 'ಅನಧಿಕೃತವಾಗಿ' ಹಾಕಲಾಗಿದೆ ಎಂದು ಅಹಮದಾಬಾದ್ ಅಪರಾಧ ವಿಭಾಗ ಹೇಳಿದೆ.

ಈ ಘಟನೆಗಳ ತನಿಖೆಯ ವೇಳೆ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ನಟವರ್‌ಭಾಯ್ ಪೋಪಟ್‌ಭಾಯ್, ಜತಿನ್‌ಭಾಯ್ ಚಂದ್ರಕಾಂತ್ ಭಾಯಿ ಪಟೇಲ್, ಕುಲದೀಪ್ ಶರದ್‌ಕುಮಾರ್ ಭಟ್, ಬಿಪಿನ್ ರವೀಂದ್ರಭಾಯಿ ಶರ್ಮಾ, ಅಜಯ್ ಸುರೇಶಭಾಯಿ ಚೌಹಾಣ್, ಅರವಿಂದ್ ಗೊರ್ಜಿಭಾಯಿ ಚೌಹಾಣ್, ಜೀವನ್‌ಭಾಯ್ ವಸುಭಾಯಿ ಮಹೇಶ್ವರಿ ಮತ್ತು ಪರೇಶ್ ವಾಸುದೇವಭಾಯ್ ತುಳಸಿಯಾ ಎಂದು ಗುರುತಿಸಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಇಸುದನ್ ಗಧ್ವಿ, ಬಂಧಿತರು ಪಕ್ಷದ ಕಾರ್ಯಕರ್ತರಾಗಿದ್ದು, ಪೊಲೀಸರ ಈ ಕ್ರಮವು ಬಿಜೆಪಿ ಭಯಭೀತವಾಗಿರುವುದನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯ ಸರ್ವಾಧಿಕಾರ ನೋಡಿ!, ಮೋದಿ ಹಠಾವೋ ದೇಶ್ ಬಚಾವೋ ಎಂಬ ಪೋಸ್ಟರ್‌ಗಳಿಗೆ ಸಂಬಂಧಿಸಿದಂತೆ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಜೈಲಿಗೆ ಹಾಕಲಾಗಿದೆ. ಇದು ಮೋದಿ ಮತ್ತು ಬಿಜೆಪಿಯ ಭಯವಲ್ಲದಿದ್ದರೆ ಮತ್ತೇನು?. ನಿಮಗೆ ಬೇಕಾದಷ್ಟು ಪ್ರಯತ್ನಿಸಿ! ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹೋರಾಟ ನಡೆಸಲಿದ್ದಾರೆ ಎಂದು ಗಧ್ವಿ ಟ್ವೀಟ್ ಮಾಡಿದ್ದಾರೆ.

ಈಮಧ್ಯೆ, ಆಮ್ ಆದ್ಮಿ ಪಕ್ಷ (ಎಎಪಿ) 22 ರಾಜ್ಯಗಳಲ್ಲಿ 'ಮೋದಿ ಹಠಾವೋ, ದೇಶ್ ಬಚಾವೋ' ಎಂಬ ಘೋಷಣೆಗಳೊಂದಿಗೆ ರಾಷ್ಟ್ರವ್ಯಾಪಿ ಪೋಸ್ಟರ್ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಎಎಪಿಯ ರಾಜ್ಯ ಸಂಚಾಲಕ ಗೋಪಾಲ್ ರೈ ಗುರುವಾರ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ-ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸುವ ಮತ್ತು ನಿರುದ್ಯೋಗವನ್ನು ಹೋಗಲಾಡಿಸುವ ಬದಲು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊನೆಗೊಳಿಸುವಲ್ಲಿ ತೊಡಗಿದ್ದಾರೆ ಎಂದು ಗೋಪಾಲ್ ರೈ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ದೇಶದಾದ್ಯಂತ 22 ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಇತರ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ. 'ಪ್ರಧಾನಿ ಮೋದಿ ಅವರು ರೈತರಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ, ಕಾರ್ಮಿಕರ ಹಕ್ಕುಗಳನ್ನು ಹೇಗೆ ಕಸಿದುಕೊಂಡರು, ವಿಶ್ವವಿದ್ಯಾನಿಲಯಗಳಲ್ಲಿ ದಮನಿತರಿಗೆ ದೌರ್ಜನ್ಯ ಎಂಬ ಸಂದೇಶವನ್ನು ರಾಷ್ಟ್ರದಾದ್ಯಂತ ರವಾನಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. 

ಈ ಅಭಿಯಾನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಏಪ್ರಿಲ್ 10 ರಿಂದ ರಾಷ್ಟ್ರದಾದ್ಯಂತ ಇರುವ ವಿಶ್ವವಿದ್ಯಾಲಯಗಳಲ್ಲಿ ಇದೇ ರೀತಿಯ ಪೋಸ್ಟರ್‌ಗಳನ್ನು ಹಾಕಲಾಗುವುದು ಎಂದು ರೈ ಹೇಳಿದರು.

ಇದಕ್ಕೂ ಮುನ್ನ, ಮಾರ್ಚ್ 23 ರಂದು ಎಎಪಿ ಜಂತರ್ ಮಂತರ್‌ನಲ್ಲಿ 'ಮೋದಿ ಹಟಾವೋ, ದೇಶ್ ಬಚಾವೋ' ಘೋಷಣೆಯಡಿಯಲ್ಲಿ ದೊಡ್ಡ ಸಾರ್ವಜನಿಕ ಸಭೆಯನ್ನು ನಡೆಸಿತು. ಇದನ್ನು ಎಎಪಿ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಉದ್ದೇಶಿಸಿ ಮಾತನಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com