ತ್ರಿಪುರಾ: ಇಬ್ಬರು ಅಪ್ರಾಪ್ತ ಬುಡಕಟ್ಟು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ, ಓರ್ವನ ಬಂಧನ
ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ಬುಡಕಟ್ಟು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Published: 12th May 2023 03:11 PM | Last Updated: 12th May 2023 03:11 PM | A+A A-

ಸಾಂದರ್ಭಿಕ ಚಿತ್ರ
ಅಗರ್ತಲಾ: ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ಬುಡಕಟ್ಟು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಯನ್ನು ಟಿಂಘರಿಯಾದ ಮೊಲರೈ ಜಮಾತಿಯಾ ಎಂದು ಗುರುತಿಸಲಾಗಿದೆ. ಆದರೆ ಉಳಿದ ಎಂಟು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಸಹಾಯಕ ಇನ್ಸ್‌ಪೆಕ್ಟರ್ ಜನರಲ್(ಎಐಜಿ) ಜ್ಯೋತಿಷ್ಮನ್ ದಾಸ್ ಚೌಧರಿ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಇಬ್ಬರು ಹುಡುಗಿಯರು ಬುಧವಾರ ಜಿಲ್ಲೆಯ ಅಮರಪುರ ಪಟ್ಟಣದಲ್ಲಿ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ 'ಬೈಶಾಕಿ ಮೇಳ'ದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಬಂಧಿತ ಆರೋಪಿ ಮೊಲರೈ ಫೇಸ್‌ಬುಕ್‌ನಲ್ಲಿ ಓರ್ವ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
"ಮೊಲರೈ ಜಾತ್ರೆ ಆವರಣದಿಂದ ಬುಧವಾರ ರಾತ್ರಿ ಬಾಲಕಿಯರನ್ನು ಸ್ಕೂಟರ್‌ನಲ್ಲಿ ಚೆಚುವಾದಲ್ಲಿನ ರಬ್ಬರ್ ತೋಟಕ್ಕೆ ಕರೆದೊಯ್ದಿದ್ದು, ಅಲ್ಲಿ ಏಳರಿಂದ ಎಂಟು ಯುವಕರು ಕಾಯುತ್ತಿದ್ದರು. ತೋಟ ತಲುಪಿದ ನಂತರ ಮೊಲರೈ ಮತ್ತು ಆತನ ಸ್ನೇಹಿತರು ಇಬ್ಬರು ಹುಡುಗಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ" ಎಂದು ಎಐಜಿ ಹೇಳಿದ್ದಾರೆ.
ಮೊಲರೈ ಗುರುವಾರ ಬೆಳಗಿನ ಜಾವ ಈ ಇಬ್ಬರೂ ಹುಡುಗಿಯರನ್ನು ಅಮರಪುರದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತರು ಬಿರ್‌ಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇಬ್ಬರು ಬಾಲಕಿಯರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೊಲರೈನನ್ನು ಗುರುವಾರ ಬಂಧಿಸಿದ್ದಾರೆ.
"ನಾವು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ್ದೇವೆ ಮತ್ತು ಇತರ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ. ತನಿಖಾ ಪ್ರಕ್ರಿಯೆಯ ಭಾಗವಾಗಿ ಸಂತ್ರಸ್ತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ತ್ರಿಪುರಾ ಮಹಿಳಾ ಆಯೋಗ(ಟಿಸಿಡಬ್ಲ್ಯು) ಇಬ್ಬರು ಬುಡಕಟ್ಟು ಬಾಲಕಿಯರ ಮೇಲಿನ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿದೆ.