ಭಾಗವತ ಕಥೆ ಪ್ರವಚನ ಕೇಳಿದ ಕೆಲವೇ ಗಂಟೆಗಳ ನಂತರ ಶವವಾಗಿ ಪತ್ತೆಯಾದ ದಂಪತಿ!
ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಹಳ್ಳಿಯೊಂದರಲ್ಲಿ ದಂಪತಿ ಶ್ರೀಮದ್ ಭಾಗವತ್ ಕಥಾ ಪ್ರವಚನದಲ್ಲಿ ಭಾಗವಹಿಸಿದ ಕೆಲವೇ ಗಂಟೆಗಳ ನಂತರ ಕೃಷಿ ಭೂಮಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.
Published: 18th May 2023 03:42 PM | Last Updated: 18th May 2023 03:42 PM | A+A A-

ಸಾಂದರ್ಭಿಕ ಚಿತ್ರ
ದಾಮೋಹ್: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಹಳ್ಳಿಯೊಂದರಲ್ಲಿ ದಂಪತಿ ಶ್ರೀಮದ್ ಭಾಗವತ ಕಥೆ ಪ್ರವಚನದಲ್ಲಿ ಭಾಗವಹಿಸಿದ ಕೆಲವೇ ಗಂಟೆಗಳ ನಂತರ ಕೃಷಿ ಭೂಮಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸಂತ್ರಸ್ತರನ್ನು ಹರದಯಾಳ್ ಸಿಂಗ್ ಲೋಧಿ (58) ಮತ್ತು ಅವರ ಪತ್ನಿ ಭಗವತಿ (55) ಎಂದು ಗುರುತಿಸಲಾಗಿದ್ದು, ಬುಧವಾರ ತಡರಾತ್ರಿ ಹಟಾ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ದಂಪತಿ ತಮ್ಮ ಇತ್ವಾ-ಹೀರಾಲಾಲ್ ಗ್ರಾಮದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ತಮ್ಮ ಮಗಳ ಗ್ರಾಮವಾದ ಲುಹಾರಿಗೆ ಸಂಜೆ ಶ್ರೀಮದ್ ಭಾಗವತ್ ಕಥಾ ಪ್ರವಚನದಲ್ಲಿ ಪಾಲ್ಗೊಳ್ಳಲು ಬಂದಿದ್ದರು.
ಧಾರ್ಮಿಕ ಪ್ರವಚನದ ನಂತರ ಅವರು ಮನೆಗೆ ಹಿಂತಿರುಗದ ಕಾರಣ, ಅವರ ಕುಟುಂಬ ಸದಸ್ಯರು ಮತ್ತು ಪರಿಚಯಸ್ಥರು ಹುಡುಕಾಟ ನಡೆಸಿದಾಗ ಅವರು ಕೃಷಿ ಭೂಮಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಹಟಾ ಏರಿಯಾ ಇನ್ಸ್‌ಪೆಕ್ಟರ್ ಮನೀಶ್ ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.
ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವಗಳ ಬಳಿ ಸಲ್ಫಾ ಬಾಟಲಿಗಳು ಬಿದ್ದಿರುವುದು ಕಂಡುಬಂದಿದ್ದು, ಮಾತ್ರೆಗಳನ್ನು ಸೇವಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಅವರ ಸಾವಿನ ಹಿಂದಿನ ಕಾರಣ ತಿಳಿಯಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ.