ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಪಕ್ಷ 'ಮೋದಿ'ಯನ್ನು ಅವಲಂಬಿಸಿದೆ: ಶಿವರಾಜ್ ಸಿಂಗ್ ಚೌಹಾಣ್

ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯು ಯಾರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮುಂಬರುವ ಚುನಾವಣೆಯಲ್ಲಿ ಪಕ್ಷವು ಸಂಪೂರ್ಣವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್

ಭೋಪಾಲ್: ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯು ಯಾರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮುಂಬರುವ ಚುನಾವಣೆಯಲ್ಲಿ ಪಕ್ಷವು ಸಂಪೂರ್ಣವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.

ಶುಕ್ರವಾರ ರಾಜ್ಯದಾದ್ಯಂತ 1,000ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲ್ಲಲು ಪಕ್ಷವು ಪ್ರಧಾನಿ ಮೋದಿಯನ್ನು ಹೊಂದಿದೆ ಎಂದು ಹೇಳಿದರು.

ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಮುನ್ನ ಬಿಜೆಪಿ ಕಾರ್ಯಕರ್ತರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮುಂದಾಗಿದ್ದು, ಚೌಹಾಣ್ ಅವರು ಈ ಹೇಳಿಕೆ ನೀಡಿದ್ದಾರೆ. 'ಮಧ್ಯ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನನಗಿದೆ. ಉನ್ಕೆ (ಕಾಂಗ್ರೆಸ್) ಕೆ ಪಾಸ್ ಕ್ಯಾ ಹೈ? (ಚುನಾವಣೆ ಗೆಲ್ಲುವುದಕ್ಕಾಗಿ). ಹಮಾರೆ ಪಾಸ್ ತೋ ನರೇಂದ್ರ ಮೋದಿ ಹೈ (ಅವರ ಬಳಿ ಏನಿದೆ?. ನಮ್ಮ ಬಳಿ ನರೇಂದ್ರ ಮೋದಿ ಇದ್ದಾರೆ) ಎಂದರು.

ಈಮಧ್ಯೆ, ತಾವು ಹೊಸದಾಗಿ ಪರಿಚಯಿಸಿದ ಪ್ರಮುಖ 'ಲಾಡ್ಲಿ ಬೆಹನಾ ಯೋಜನೆ' ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಚಿಂತಿತರಾಗಿದ್ದಾರೆ. ಅದಕ್ಕಾಗಿಯೇ ಅವರು 'ನಾರಿ ಸಮ್ಮಾನ್ ಯೋಜನೆ' ತರುವುದಾಗಿ ಭರವಸೆ ನೀಡಿದ್ದಾರೆ ಎಂದು ಚೌಹಾಣ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಬೇರೆ ಬೇರೆ ವೇಷ ಧರಿಸಿ ಬಂದು ಸಾರ್ವಜನಿಕರಿಗೆ ಮೋಸ ಮಾಡಲು ಯತ್ನಿಸುವ ಕಾಂಗ್ರೆಸ್ ಮುಖಂಡರನ್ನು 'ಕಾಲ್ನೇಮಿ' ಎಂದು ಕರೆದರು.

ಈ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಕೆ.ಕೆ.ಮಿಶ್ರಾ, ಆಡಳಿತ ಪಕ್ಷಕ್ಕೆ ತಮ್ಮ ನಾಯಕನ ಮೇಲೆ ನಂಬಿಕೆ ಇಲ್ಲ. ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದ ಸುದೀರ್ಘ ಅವಧಿಯ ಮುಖ್ಯಮಂತ್ರಿ. ಆದರೆ, ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಅವರ ಮೇಲೆ ನಂಬಿಕೆಯಿಲ್ಲ. ರಾಜ್ಯ ಬಿಜೆಪಿ ಪ್ರಮುಖ ನಾಯಕತ್ವದ ಬಿಕ್ಕಟ್ಟಿಗೆ ಒಳಗಾಗುತ್ತಿದೆ. ಕೇಸರಿ ಪಕ್ಷವು ವಿಧಾನಸಭಾ ಚುನಾವಣೆಗೆ ಚೌಹಾಣ್ ಅವರನ್ನು ತನ್ನ ಚುನಾವಣೆಯ 'ಮುಖ'ವನ್ನಾಗಿ ಮಾಡುವುದಿಲ್ಲ ಎಂದು ನಮಗೆ ಖಚಿತವಾಗಿತ್ತು. ಪ್ರಧಾನಿ ಮೋದಿಯನ್ನು ಎದುರಿಸಲು ಕಾಂಗ್ರೆಸ್ ಪ್ರಬಲ ನಾಯಕತ್ವವನ್ನು ಹೊಂದಿದೆ' ಎಂದು ಶನಿವಾರ ಐಎಎನ್‌ಎಸ್‌ಗೆ ತಿಳಿಸಿದರು.

ಈಮಧ್ಯೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲ್ ನಾಥ್ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ ಪಕ್ಷವು ಚುನಾವಣೆಯನ್ನು ಎದುರಿಸಲಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com