ಸೆಕ್ಸ್ ವರ್ಕ್ ಸಾರ್ವಜನಿಕವಾಗಿದ್ದರೆ ಮಾತ್ರ ಅಪರಾಧ ಎಂದ ಮುಂಬೈ ಕೋರ್ಟ್; ಬಂಧಿತ ಲೈಂಗಿಕ ಕಾರ್ಯಕರ್ತೆ ಬಿಡುಗಡೆ

ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ರದ್ದುಗೊಳಿಸಿದ ಮುಂಬೈ  ಸೆಷನ್ಸ್ ನ್ಯಾಯಾಲಯ, 34 ವರ್ಷದ ಲೈಂಗಿಕ ಕಾರ್ಯಕರ್ತೆಯನ್ನು ಬಿಡುಗಡೆ ಮಾಡುವಂತೆ ಶೆಲ್ಟರ್ ಹೋಮ್‌ಗೆ ನಿರ್ದೇಶಿಸಿದೆ. ಅಲ್ಲದೆ ನಿಯಮದಂತೆ, ಸಾರ್ವಜನಿಕ ಸ್ಥಳದಲ್ಲಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ರದ್ದುಗೊಳಿಸಿದ ಮುಂಬೈ  ಸೆಷನ್ಸ್ ನ್ಯಾಯಾಲಯ, 34 ವರ್ಷದ ಲೈಂಗಿಕ ಕಾರ್ಯಕರ್ತೆಯನ್ನು ಬಿಡುಗಡೆ ಮಾಡುವಂತೆ ಶೆಲ್ಟರ್ ಹೋಮ್‌ಗೆ ನಿರ್ದೇಶಿಸಿದೆ. ಅಲ್ಲದೆ ನಿಯಮದಂತೆ, ಸಾರ್ವಜನಿಕ ಸ್ಥಳದಲ್ಲಿ ಇತರರಿಗೆ ಕಿರಿಕಿರಿ ಉಂಟುಮಾಡುವಂತೆ ಲೈಂಗಿಕ ಕೆಲಸದಲ್ಲಿ ತೊಡಗಿದ್ದರೆ ಮಾತ್ರ ಅಪರಾಧವಾಗುತ್ತದೆ ಎಂದು ಹೇಳಿದೆ.

ಕಳೆದ ಮಾರ್ಚ್ 15 ರಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಲೈಂಗಿಕ ಕಾರ್ಯಕರ್ತೆಯೊಬ್ಬರಿಗೆ ಮುಂಬೈನ ಶೆಲ್ಟರ್ ಹೋಮ್‌ನಲ್ಲಿ ಒಂದು ವರ್ಷ ಬಂಧನದಲ್ಲಿರುವಂತೆ ಆದೇಶಿಸಿತ್ತು. ನಂತರ ಮಹಿಳೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರಶ್ನಿಸಿ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಿ.ವಿ.ಪಾಟೀಲ್ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ್ದು, ಅವರ ಆದೇಶದ ವಿವರ ಇತ್ತೀಚೆಗೆ ಲಭ್ಯವಾಗಿದೆ.

ಕಳೆದ ಫೆಬ್ರವರಿಯಲ್ಲಿ ಉಪನಗರ ಮುಲುಂಡ್‌ನಲ್ಲಿರುವ ವೇಶ್ಯಾಗೃಹದ ಮೇಲೆ ದಾಳಿ ನಡೆಸಿದ ನಂತರ ಈ ಮಹಿಳೆಯನ್ನು ಬಂಧಿಸಲಾಗಿತ್ತು. ನಂತರ, ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಿಸಿ, ಆಕೆಯೊಂದಿಗೆ ಇತರ ಇಬ್ಬರನ್ನು ಮಜಗಾಂವ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಮಹಿಳೆ ತಾನು ಯಾವುದೇ ಅನೈತಿಕ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ ಎಂದು ಸೆಷನ್ಸ್ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

"ನಿಯಮದ ಪ್ರಕಾರ, ಸ್ವತಃ ಲೈಂಗಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಅಪರಾಧವಲ್ಲ. ಆದರೆ ಇತರರಿಗೆ ಕಿರಿಕಿರಿ ಉಂಟುಮಾಡುವ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕಾರ್ಯದಲ್ಲಿ ತೊಡಗಿದ್ದರೆ ಮಾತ್ರ ಅಪರಾಧ ಎಂದು ಕರೆಯಬಹುದು" ಎಂದು ಸೆಷನ್ಸ್ ನ್ಯಾಯಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com