ಅಯೋಧ್ಯೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಗೆ ಸಂಕಷ್ಟ: ದೂರ ಉಳಿದ ಬಿಜೆಪಿ
ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರು ತಮ್ಮ ಶಕ್ತಿ ಪ್ರದರ್ಶಿಸಲು ಜೂನ್ 5ರಂದು ಅಯೋಧ್ಯೆಯಲ್ಲಿ ರ್ಯಾಲಿ ನಡೆಸಲಿದ್ದಾರೆ.
Published: 24th May 2023 04:45 PM | Last Updated: 24th May 2023 06:35 PM | A+A A-

ಬ್ರಿಜ್ ಭೂಷಣ್ ಸಿಂಗ್
ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರು ತಮ್ಮ ಶಕ್ತಿ ಪ್ರದರ್ಶಿಸಲು ಜೂನ್ 5ರಂದು ಅಯೋಧ್ಯೆಯಲ್ಲಿ ರ್ಯಾಲಿ ನಡೆಸಲಿದ್ದಾರೆ. ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪಗಳಿಗೆ ಗುರಿಯಾಗಿರುವ ಬ್ರಿಜ್ ಭೂಷಣ್, 2024ರಲ್ಲಿ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಈ ರ್ಯಾಲಿಯನ್ನು ಡ್ಯಾಮೇಜ್ ಕಂಟ್ರೋಲ್ ಮಾಡುವ ಅವರ ಪ್ರಯತ್ನ ಎಂದು ನೋಡಲಾಗುತ್ತಿದೆ. ಏತನ್ಮಧ್ಯೆ, ಬಿಜೆಪಿಯ ಅಯೋಧ್ಯೆ ಘಟಕವು ಬ್ರಿಜ್ ಭೂಷಣ್ ರ ರ್ಯಾಲಿಯಿಂದ ದೂರ ಉಳಿದಿದೆ.
ಬ್ರಿಜ್ ಭೂಷಣ್ ಅವರು ಅಯೋಧ್ಯೆಯ ರಾಮಕಥಾ ಪಾರ್ಕ್‌ನಲ್ಲಿ ಜನಜಾಗೃತಿ ರ್ಯಾಲಿಗೆ ಕರೆ ನೀಡಿದ್ದಾರೆ. ಇದರಲ್ಲಿ ಹಲವು ರಾಜ್ಯಗಳಿಂದ ಸಂತರು, ಋಷಿಮುನಿಗಳು ಸೇರಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಶಿಕ್ಷಣ, ಕಾನೂನು ಮತ್ತು ಸಾಮಾಜಿಕ ಕ್ಷೇತ್ರದ ತಜ್ಞರನ್ನೂ ಆಹ್ವಾನಿಸಲಾಗಿದೆ. ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾದ ನಂತರ ಇದು ಬ್ರಿಜ್ ಭೂಷಣ್ ಅವರ ಮೊದಲ ಪ್ರಮುಖ ರ್ಯಾಲಿಯಾಗಿದೆ. ಗೊಂಡಾ ಹೊರತುಪಡಿಸಿ, ರ್ಯಾಲಿಯಲ್ಲಿ ಗರಿಷ್ಠ ಜನರನ್ನು ಸಂಗ್ರಹಿಸಲು ಬ್ರಿಜ್ ಭೂಷಣ್ ಅಯೋಧ್ಯೆ, ಬಸ್ತಿ, ಬಹ್ರೈಚ್ ಸೇರಿದಂತೆ ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ನಿರಂತರವಾಗಿ ಪ್ರವಾಸ ಮಾಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಈ ರ್ಯಾಲಿಗೂ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ. ಈ ಬಗ್ಗೆ ನಾಯಕತ್ವದಿಂದ ಯಾವುದೇ ಆದೇಶ ಬಂದಿಲ್ಲ. ನಾಯಕತ್ವದ ನಿರ್ದೇಶನ ಬಂದಾಗ ಮಾತ್ರ ಪಕ್ಷದ ಮಟ್ಟದಲ್ಲಿ ಸ್ಥಳೀಯ ಕಾರ್ಯಕರ್ತರು ಸೇರಿಕೊಳ್ಳುತ್ತಾರೆ. ಮತ್ತೊಂದೆಡೆ, ಸಂಸದ ಬ್ರಿಜ್ ಭೂಷಣ್ ಬೆಂಬಲಿಗರು ಇದು ರಾಜಕೀಯ ರ್ಯಾಲಿ ಅಲ್ಲ ಎಂದು ಹೇಳುತ್ತಾರೆ.
ಇದನ್ನೂ ಓದಿ: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹ: ಮೇಣದ ಬತ್ತಿ ಹಿಡಿದು ಕುಸ್ತಿಪಟುಗಳ ಪ್ರತಿಭಟನೆ
ರ್ಯಾಲಿಯಲ್ಲಿ ಸಾಧುಗಳು ಮತ್ತು ಬುದ್ಧಿಜೀವಿಗಳೊಂದಿಗೆ ಮಾತ್ರ ಚರ್ಚೆ ನಡೆಯಲಿದೆ. ಸುಳ್ಳು ಆರೋಪ ಮಾಡುವವರ ವಿರುದ್ಧ ಪ್ರಸ್ತುತ ಪ್ರಕರಣ ದಾಖಲಿಸಲಾಗಿದೆ ಆದರೆ ಶಿಕ್ಷೆಯು ಅವರ ಅಪರಾಧಕ್ಕೆ ಅನುಗುಣವಾಗಿಲ್ಲ ಎಂದು ಅವರು ಹೇಳುತ್ತಾರೆ. ಇಂತಹ ಪ್ರಕರಣಗಳಲ್ಲಿ ಸುಳ್ಳು ಆರೋಪ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನಿಗೆ ತಿದ್ದುಪಡಿ ತರುವಂತೆ ರ್ಯಾಲಿಯಲ್ಲಿ ಒತ್ತಾಯಿಸಲಾಗುವುದು.
ನಾರ್ಕೋ ಚಾಲೆಂಜ್ ನಂತರ ದೊಡ್ಡ ಹೋರಾಟಕ್ಕೆ ತಯಾರಿ ನಡೆಸುತ್ತಿರುವ ಕುಸ್ತಿಪಟು
ಮತ್ತೊಂದೆಡೆ, ಸೋಮವಾರ ಬ್ರಿಜ್‌ಭೂಷಣ್ ಸಿಂಗ್ ಅವರ ನಾರ್ಕೋ ಟೆಸ್ಟ್ ಸವಾಲಿಗೆ ಪ್ರತಿಕ್ರಿಯಿಸಿದ ಕುಸ್ತಿಪಟುಗಳು ನಾರ್ಕೋ ಪರೀಕ್ಷೆಗೆ ಸಿದ್ಧ ಎಂದು ಘೋಷಿಸಿದ್ದರು. ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರು ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧ ಆರೋಪ ಮಾಡಿರುವ ಅವರು ಮಾತ್ರವಲ್ಲದೆ ಎಲ್ಲಾ ಮಹಿಳಾ ಕುಸ್ತಿಪಟುಗಳು ಪರೀಕ್ಷೆಗೆ ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ದೇಶದ ಹಲವು ಪ್ರಮುಖ ಕುಸ್ತಿಪಟುಗಳು ಏಪ್ರಿಲ್ 23 ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ಈ ಹೋರಾಟವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲು ಸಿದ್ಧತೆ ನಡೆಸಿದ್ದಾರೆ. ಶೀಘ್ರದಲ್ಲೇ ಹರಿಯಾಣದಲ್ಲಿ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ನೂತನ ಸಂಸತ್ ಭವನದ ಉದ್ಘಾಟನೆಯ ದಿನದಂದು ಮಹಿಳಾ ಮಹಾಪಂಚಾಯತ್ ನಡೆಯಲಿದೆ.