
ಶರದ್ ಪವಾರ್ ಭೇಟಿಯಾದ ಕೇಜ್ರಿವಾಲ್ ಮತ್ತಿತರರು
ಮುಂಬೈ: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುರುವಾರ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾದರು. ವಾಣಿಜ್ಯ ನಗರಿ ಮುಂಬೈಗೆ ಎರಡು ದಿನಗಳ ಭೇಟಿಯಲ್ಲಿರುವ ಕೇಜ್ರಿವಾಲ್, ದಕ್ಷಿಣ ಮುಂಬೈಯಲ್ಲಿರುವ ವೈ ಬಿ ಚವ್ಹಾಣ್ ಸೆಂಟರ್ ನಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಅವರೊಂದಿಗೆ ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಬುಧವಾರ ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದ ಎಎಪಿ ನಾಯಕರು, ದೆಹಲಿಯಲ್ಲಿ ಸೇವೆಗಳ ನಿಯಂತ್ರಣ ಕುರಿತ ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಎಎಪಿಯ ಹೋರಾಟಕ್ಕೆ ಬೆಂಬಲ ಕೋರಿದರು. ಮಂಗಳವಾರ ಕೋಲ್ಕತ್ತಾದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಕೂಡಾ ಭೇಟಿಯಾಗಿದ್ದರು.
ಇದನ್ನೂ ಓದಿ: ಪ್ರಜಾಪ್ರಭುತ್ವ ವಿರೋಧಿಗಳನ್ನು ಸೋಲಿಸಲು ಒಗ್ಗೂಡುತ್ತಿದ್ದೇವೆ: ಉದ್ಧವ್ ಠಾಕ್ರೆ
ದೆಹಲಿಯಲ್ಲಿ ಗ್ರೂಪ್-ಎ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಯ ಅಧಿಕಾರಕ್ಕಾಗಿ ಪ್ರಾಧಿಕಾರ ರಚಿಸಲು ಕೇಂದ್ರ ಸರ್ಕಾರ ಕಳೆದ ಶುಕ್ರವಾರ ಸುಗ್ರೀವಾಜ್ಞೆ ಪ್ರಕಟಿಸಿತ್ತು. ದೆಹಲಿಯಲ್ಲಿ ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂಮಿಯನ್ನು ಹೊರತುಪಡಿಸಿ ಸೇವೆಗಳ ನಿಯಂತ್ರಣವನ್ನು ಚುನಾಯಿತ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಹಸ್ತಾಂತರಿಸಿದ ಒಂದು ವಾರದ ನಂತರ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.
ಮೇ 11 ರ ಸುಪ್ರೀಂಕೋರ್ಟ್ ತೀರ್ಪಿನ ಮೊದಲು ದೆಹಲಿ ಸರ್ಕಾರದ ಎಲ್ಲಾ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳು ಲೆಫ್ಟಿನೆಂಟ್ ಗವರ್ನರ್ ಅವರ ಕಾರ್ಯನಿರ್ವಾಹಕ ನಿಯಂತ್ರಣದಲ್ಲಿತ್ತು.