ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ನಡೆಸಿದ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷನ ಬಂಧನ

ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವಿದ್ಯಾರ್ಥಿ ನಾಯಕನನ್ನು ಅರುಣಾಚಲ ಪ್ರದೇಶ ಪೊಲೀಸರು ಇಲ್ಲಿ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಟಾನಗರ: ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವಿದ್ಯಾರ್ಥಿ ನಾಯಕನನ್ನು ಅರುಣಾಚಲ ಪ್ರದೇಶ ಪೊಲೀಸರು ಇಲ್ಲಿ ಬಂಧಿಸಿದ್ದಾರೆ.

ಸಂತ್ರಸ್ತೆ ಮೇ 23 ರಂದು ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ಆರೋಪಿ ಮಿಲಿ ಟೆಟಿಕ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ಕ್ಯಾಪಿಟಲ್ ಎಸ್‌ಪಿ ರೋಹಿತ್ ರಾಜ್‌ಬೀರ್ ಸಿಂಗ್ ಹೇಳಿದ್ದಾರೆ.

ಆರೋಪಿ ಟೆಟಿಕ್, ಕಮ್ಲೆ ಜಿಲ್ಲಾ ವಿದ್ಯಾರ್ಥಿಗಳ ಒಕ್ಕೂಟದ (ಕೆಡಿಎಸ್‌ಯು) ಅಧ್ಯಕ್ಷರಾಗಿದ್ದಾರೆ.

ಇಲ್ಲಿಗೆ ಸಮೀಪದ ಟೊಮೊ ರಿಬಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಮೆಡಿಕಲ್ ಸೈನ್ಸಸ್‌ನಲ್ಲಿ (ಟಿಆರ್‌ಐಎಚ್‌ಎಂಎಸ್) ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆಯ ತಪ್ಪೊಪ್ಪಿಗೆ ಮತ್ತು ಹೇಳಿಕೆಗಾಗಿ ಪೊಲೀಸರು ಕಾಯುತ್ತಿದ್ದಾರೆ. ಮ್ಯಾಜಿಸ್ಟ್ರೇಟ್ ವರದಿ ಬಂದ ನಂತರ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಘಟನೆಯು ಮೇ 22ರಂದು ಸಂಭವಿಸಿದೆ ಮತ್ತು ಪೊಲೀಸರು ಟಿಆರ್‌ಐಎಚ್‌ಎಂಎಸ್‌ನಿಂದ ಅತ್ಯಾಚಾರದ ಮಾಹಿತಿಯನ್ನು ಪಡೆದಿದ್ದಾರೆ. ಸಂತ್ರಸ್ತೆ ಮರುದಿನ ಎಫ್‌ಐಆರ್ ದಾಖಲಿಸಿದ್ದು, ಅದರಂತೆ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೀಘ್ರವೇ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ಸಿಂಗ್ ಹೇಳಿದರು.

ಸದ್ಯ ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಸಂತ್ರಸ್ತೆ ನಿಗಾದಲ್ಲಿ ಮತ್ತು ಆರೈಕೆಯಲ್ಲಿದ್ದಾರೆ. ಸಂತ್ರಸ್ತೆ ಲಾಂಗ್ಡಿಂಗ್ ಜಿಲ್ಲೆಯವರಾಗಿದ್ದು, ಪ್ರಸ್ತುತ ನಿರ್ಜುಲಿಯಲ್ಲಿ ನೆಲೆಸಿದ್ದಾರೆ.

ಈಮಧ್ಯೆ, ಅರುಣಾಚಲ ಪ್ರದೇಶ ಮಹಿಳಾ ಕಲ್ಯಾಣ ಸೊಸೈಟಿ (ಎಪಿಡಬ್ಲುಡಬ್ಲ್ಯುಎಸ್) ಅತ್ಯಾಚಾರವನ್ನು ಖಂಡಿಸಿದೆ. ತನಿಖೆಯನ್ನು ತ್ವರಿತಗೊಳಿಸುವಂತೆ ಮತ್ತು ತನಿಖೆಯನ್ನು ಪೂರ್ಣಗೊಳಿಸದೆ ಆರೋಪಿಗಳನ್ನು ಹೊರಗೆ ಬಿಡಬೇಡಿ ಎಂದು ಪೊಲೀಸರಿಗೆ ಕರೆ ನೀಡಿದೆ.

'ಇಂತಹ ಘೋರ ಅಪರಾಧವನ್ನು ಖಂಡಿಸುವ ಅಗತ್ಯವಿದೆ ಮತ್ತು ಅದನ್ನು ಎಂದಿಗೂ ಸಹಿಸಬಾರದು. ಅತ್ಯಾಚಾರದಿಂದ ಬದುಕುಳಿದವರಿಗೆ ಎಪಿಡಬ್ಲುಡಬ್ಲ್ಯುಎಸ್ ಎಲ್ಲಾ ರೀತಿಯ ಸಹಾಯವನ್ನು ನೀಡುತ್ತದೆ. ಎಪಿಡಬ್ಲುಡಬ್ಲ್ಯುಎಸ್‌ನ ಲಾಂಗ್ಡಿಂಗ್ ಶಾಖೆಯು ಸಂತ್ರಸ್ತೆಯೊಂದಿಗೆ ಸಂಪರ್ಕದಲ್ಲಿದೆ' ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com