'ಪ್ರಜಾಪ್ರಭುತ್ವದ ದೇಗುಲ' ನೂತನ ಸಂಸತ್ ಭವನ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಾರತ!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಲೆಯೆತ್ತಿ ನಿಂತಿರುವ ಪ್ರಜಾಪ್ರಭುತ್ವದ ನೂತನ ದೇಗುಲ 'ಸಂಸತ್ ಭವನ'ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಲೋಕಾರ್ಪಣೆಗೊಳಿಸಿದರು.
ನೂತನ ಸಂಸತ್ ಭವನದ ಉದ್ಘಾಟನೆ ಫಲಕ ಅನಾವರಣಗೊಳಿಸಿದ ಪ್ರಧಾನಿ ಮೋದಿ.
ನೂತನ ಸಂಸತ್ ಭವನದ ಉದ್ಘಾಟನೆ ಫಲಕ ಅನಾವರಣಗೊಳಿಸಿದ ಪ್ರಧಾನಿ ಮೋದಿ.

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಲೆಯೆತ್ತಿ ನಿಂತಿರುವ ಪ್ರಜಾಪ್ರಭುತ್ವದ ನೂತನ ದೇಗುಲ 'ಸಂಸತ್ ಭವನ'ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಲೋಕಾರ್ಪಣೆಗೊಳಿಸಿದರು.

ಇಂದು ಬೆಳಗ್ಗೆ 7.15 ಕ್ಕೆ ಸಾಂಪ್ರದಾಯಿಕ ಬಿಳಿ ಉಡುಗೆಯಲ್ಲಿ ಪ್ರಧಾನಿ ಮೋದಿ ಅವರು ಗೇಟ್ ನಂ.1 ರಿಂದ ಸಂಸತ್ ಆವರಣಕ್ಕೆ ಆಗಮಿಸಿದರು. ಅವರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು. ಮಹಾತ್ಮ ಗಾಂಧಿ ಪ್ರತಿಮೆ ಪಕ್ಕದಲ್ಲಿ ಆಯೋಜಿಸಿದ್ದ ಪೂಜಾ ವಿಧಾನಗಳಲ್ಲಿ ಇಬ್ಬರೂ ಭಾಗಿಯಾದರು. ಕರ್ನಾಟಕದ ಶೃಂಗೇರಿ ಮಠದ ಪುರೋಹಿತರು ವೇದ ಘೋಷಗಳನ್ನು ಪಠಿಸಿದರು. ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭ ಸಾಂಘವಾಗಿ ನಡೆಯಲು "ಗಣಪತಿ ಹೋಮ" ನಡೆಸಲಾಯಿತು.

ಪೂಜಾ ವಿಧಾನಗಳು ಮುಗಿದ ಬಳಿಕ ಬಹುಚರ್ಚಿತ ರಾಜದಂಡವಾದ 'ಸೆಂಗೋಲ್​' ಅನ್ನು ತಮಿಳುನಾಡಿನ ವಿವಿಧ ಅಧೀನಂಗಳಿಂದ ಪ್ರಧಾನಿ ಮೋದಿ ಅವರಿಗೆ ಹಸ್ತಾಂತರ ಮಾಡಲಾಯಿತು. ಪೂಜ್ಯರ ಆಶೀರ್ವಾದ ಪಡೆದ ಪ್ರಧಾನಿಗಳು, ಅದರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು.

ಬಳಿಕ ಪವಿತ್ರ ರಾಜದಂಡದೊಂದಿಗೆ ಮೋದಿ ಅವರು ನಾದಸ್ವರ ಮತ್ತು ವೇದ ಮಂತ್ರಗಳ ಪಠಣಗಳ ನಡುವೆ ಮೆರವಣಿಗೆಯಲ್ಲಿ ಹೊಸ ಸಂಸತ್ ಭವನಕ್ಕೆ ಸೆಂಗೋಲ್ ಅನ್ನು ಕೊಂಡೊಯ್ದರು.

ಲೋಕಸಭೆಯ ಸಭಾಂಗಣದಲ್ಲಿ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ನಿಗದಿಪಡಿಸಲಾಗಿದ್ದ ವಿಶೇಷ ಆವರಣದಲ್ಲಿ ರಾಜದಂಡವನ್ನು ಸ್ಪೀಕರ್​ ಓಂ ಬಿರ್ಲಾ ಅವರ ಸಮೇತ ತೆರಳಿ ಅಲ್ಲಿ ಪ್ರತಿಷ್ಠಾಪಿಸಿದರು. ಅಲ್ಲಿ ಇಡಲಾಗಿದ್ದ ಜ್ಯೋತಿಯನ್ನ ಬೆಳಗಿಸುವ ಮೂಲಕ ನೂತನ ಸಂಸತ್​ ಭವನದ ಉದ್ಘಾಟನೆಗೆ ಅಧಿಕೃತ ಚಾಲನೆ ನೀಡಿದರು.

ಸೆಂಗೋಲ್​ ಸ್ಥಾಪನೆಯ ಬಳಿಕ ಅಲ್ಲಿಂದ ಹೊರಬಂದ ಪ್ರಧಾನಿ ಮೋದಿ ಅವರು, ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದ ಕೆಲ ಕಾರ್ಮಿಕರಿಗೆ ಗೌರವ ಸಲ್ಲಿಸಿದರು. ಶಾಲು ಮತ್ತು ಸ್ಮರಣಿಗೆ ನೀಡಿ ಅವರನ್ನು ಸನ್ಮಾನಿಸಿದರು. ಬಳಿಕ ನೂತನ ಸಂಸತ್ ಭವನದ ಉದ್ಘಾಟನೆಯನ್ನು ಗುರುತಿಸಲು ಫಲಕವೊಂದನ್ನು ಮೋದಿಯವರು ಅನಾವರಣಗೊಳಿಸಿದರು.

ಇದಾದ ಬಳಿಕ ಸಂಸತ್​ನ ಲಾಬಿಯಲ್ಲಿ ಏರ್ಪಡಿಸಲಾಗಿದ್ದ ಸರ್ವಧರ್ಮ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿದರು.

ಹಿಂದೂ, ಮುಸ್ಲಿಂ, ಜೈನ, ಬೌದ್ಧ, ಕ್ರೈಸ್ತ ಧರ್ಮ ಸೇರಿದಂತೆ ಎಲ್ಲ ಧರ್ಮಗಳ ಮುಖಂಡರು ಪ್ರಾರ್ಥನೆ ಸಲ್ಲಿಸಿದರು. ನೂತನ ಸಂಸತ್​ ಕಟ್ಟಡವು ಐತಿಹಾಸಿಕ ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಗಲಿ ಎಂದು ಹರಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಎಸ್ ಜೈಶಂಕರ್ ಮತ್ತು ಜಿತೇಂದ್ರ ಸಿಂಗ್, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಎರಡನೇ ಹಂತದ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆ ನಂತರ ಆರಂಭ
ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಆರಂಭವಾಗಿದ್ದು ಬೆಳಗಿನ ಜಾವ ಪೂಜಾ ಕೈಂಕರ್ಯಗಳು ಮತ್ತು ಸೆಂಗೋಲ್​​ ಪ್ರತಿಷ್ಠಾಪನೆ ನೆರವೇರಿದ್ದು, 2ನೇ ಹಂತದ ಕಾರ್ಯಕ್ರಮಗಳು ಮಧ್ಯಾಹ್ನ 12 ಗಂಟೆ ನಂತರ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಎರಡನೇ ಹಂತದ ಕಾರ್ಯಕ್ರಮದಲ್ಲಿ ದೇಶದ ಹಲವು ಗಣ್ಯರು, ವಿವಿಧ ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ.

ಎರಡನೇ ಹಂತದ ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಅಧಿಕೃತ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಎರಡು ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

ಇದಾದ ಬಳಿಕ ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿಗಳ ಸಂದೇಶವನ್ನು ರಾಜ್ಯಸಭೆಯ ಉಪಾಧ್ಯಕ್ಷರು ಓದಲಿದ್ದಾರೆ. ನಂತರ ಲೋಕಸಭೆ ಸ್ಪೀಕರ್ ಭಾಷಣ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ 75ರೂ ಮುಖಬೆಲೆಯ ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಮಾಡಲಾಗುತ್ತದೆ. ಕೊನೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮವು ಮಧ್ಯಾಹ್ನ 2:30 ರ ಸುಮಾರಿಗೆ ಸಂಪನ್ನವಾಗುತ್ತದೆ.

ಹೊಸ ಸಂಸತ್​ ಭವನದ ವಿಶೇಷತೆಗಳೇನು?
ಪ್ರಜಾಪ್ರಭುತ್ವದ ಹೊಸ ದೇಗುಲ ತ್ರಿಕೋನ ಆಕಾರದ ನಾಲ್ಕು ಅಂತಸ್ತಿನಲ್ಲಿ ನಿರ್ಮಿಸಲಾಗಿದೆ. ಸಂಸತ್ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಜ್ಞಾನ, ಶಕ್ತಿ ಮತ್ತು ಕರ್ಮ ದ್ವಾರ ಎಂದು ಹೆಸರಿಸಲಾಗಿದೆ.

ಲೋಕಸಭೆಯಲ್ಲಿ 888 ಸದಸ್ಯರು ಮತ್ತು ರಾಜ್ಯಸಭೆಯಲ್ಲಿ 300 ಸದಸ್ಯರ ಆಸನಗಳನ್ನು ಅಳವಡಿಸಲಾಗಿದೆ. ಉಭಯ ಸದನಗಳ ಜಂಟಿ ಅಧಿವೇಶನ ಲೋಕಸಭೆಯಲ್ಲೇ ನಡೆಯಲಿದ್ದು, ಅಂತಹ ಸಂದರ್ಭದಲ್ಲಿ 1280 ಸದಸ್ಯರಿಗಾಗಿ ಆಸನ ವ್ಯವಸ್ಥೆ ಮಾಡುವಷ್ಟು ದೊಡ್ಡದಾಗಿದೆ.

ಹೊಸ ಸಂಸತ್​ ಕಟ್ಟಡ 64,500 ಚದರ ಮೀಟರ್​ ವಿಸ್ತೀರ್ಣದಲ್ಲಿ ಹಳೆಯ ಸಂಸತ್ತಿನ ಪಕ್ಕದಲ್ಲೇ ನಿರ್ಮಾಣ ಮಾಡಲಾಗಿದೆ. 2020 ರ ಡಿಸೆಂಬರ್​ 10 ರಂದು ಪ್ರಧಾನಿ ಮೋದಿ ಅವರು ಇದರ ಆರಂಭಕ್ಕೆ ಶಂಕುಸ್ಥಾಪನೆ ಮಾಡಿದ್ದರು. 1200 ಕೋಟಿ ರೂಪಾಯಿ ವೆಚ್ಚದಲ್ಲಿ ಕೇವಲ ಎರಡೂವರೆ ವರ್ಷದಲ್ಲಿ ಇದನ್ನು ನಿರ್ಮಾಣ ಮಾಡಿ ದಾಖಲೆ ಬರೆಯಲಾಗಿದೆ.

ಇದರಲ್ಲಿನ ಲೋಕಸಭೆ ಹಳೆಯದಕ್ಕಿಂತ ಮೂರು ಪಟ್ಟು ಹಿರಿದಾಗಿದೆ. 17 ಸಾವಿರ ಚದರ ಮೀಟರ್​ ದೊಡ್ಡದು. ಲೋಕಸಭೆಯನ್ನು ರಾಷ್ಟ್ರಪಕ್ಷಿ ನವಿಲನ ಆಕಾರದಲ್ಲಿ ರೂಪಿಸಲಾಗಿದೆ. ರಾಜ್ಯಸಭೆಯನ್ನು ರಾಷ್ಟ್ರಪುಷ್ಪ ಕಮಲದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸಂಸತ್ತಿನ ಮೇಲೆ 6.5 ಮೀಟರ್​ ಎತ್ತರದ ನಾಲ್ಕು ಮುಖಗಳ ಸಿಂಹದ ರಾಷ್ಟ್ರಲಾಂಛನವನ್ನು ಇಡಲಾಗಿದೆ. ಇದು 9500 ಕೇಜಿ ತೂಕವಿದೆ. ಇದನ್ನು ಹೊತ್ತಿರುವ ಕೆಳಗಿನ ಭಾಗವೇ 6500 ಕೆಜಿ ತೂಕವಿದೆ.

ನೂತನ ಸಂಸತ್​ ಆಧುನೀಕರಣಗೊಂಡಿದೆ. ಸರ್ಕಾರದ ಆಶಯದಂತೆ ಕಾಗದ ರಹಿತವಾಗಿ ಕಾರ್ಯನಿರ್ವಹಣೆ ಮಾಡುವಂತೆ ರೂಪಿಸಲಾಗಿದೆ. ಎಲ್ಲಾ ಆಸನಗಳ ಬಳಿ ಮಲ್ಟಿಮೀಡಿಯಾ ಡಿಸ್​ಪ್ಲೇಗಳನ್ನು ಅಳವಡಿಸಲಾಗಿದೆ. ಆಧುನಿಕ ಗ್ಯಾಜೆಟ್​​ಗಳು ಇಲ್ಲಿದ್ದು, ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅದನ್ನು ಕೃತಕಬುದ್ಧಿಮತ್ತೆಯ(ಎಐ) ನೆರವಿನಿಂದ ಭಾಷಾಂತರ ಮಾಡುವ ವ್ಯವಸ್ಥೆಯನ್ನು ಹೊಂದಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com