ಗುಂಡು ಹಾರಿಸಿ ಕೊಲ್ಲಲು ಬಂದವರಿಗೆ 'ಪೊರಕೆ ಪೂಜೆ': ರೌಡಿಗಳನ್ನು ಓಡಿಸಿದ ಮಹಿಳೆಯ ವಿಡಿಯೋ ವೈರಲ್

ಮನೆ ಮುಂದೆ ನಿಂತಿದ್ದ ವ್ಯಕ್ತಿ ಮೇಲೆ ಗುಂಡು ಹಾರಿಸಿ ಕೊಲ್ಲಲು ಬಂದ ದುಷ್ಕರ್ಮಿಗಳನ್ನು ಕಸ ಗುಡಿಸುವ ಪೊರಕೆಯಿಂದಲೇ ಮಹಿಳೆಯೊಬ್ಬರು ಹೆದರಿಸಿ ಓಡಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.
ರೌಡಿಗಳನ್ನು ಓಡಿಸಿದ ಮಹಿಳೆ
ರೌಡಿಗಳನ್ನು ಓಡಿಸಿದ ಮಹಿಳೆ

ಭಿವಾಂಡಿ: ಮನೆ ಮುಂದೆ ನಿಂತಿದ್ದ ವ್ಯಕ್ತಿ ಮೇಲೆ ಗುಂಡು ಹಾರಿಸಿ ಕೊಲ್ಲಲು ಬಂದ ದುಷ್ಕರ್ಮಿಗಳನ್ನು ಕಸ ಗುಡಿಸುವ ಪೊರಕೆಯಿಂದಲೇ ಮಹಿಳೆಯೊಬ್ಬರು ಹೆದರಿಸಿ ಓಡಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

ಹರ್ಯಾಣದ ಭಿವಾಂಡಿಯಲ್ಲಿ ಈ ಘಟನೆ ನಡೆದಿದ್ದು, ಭಿವಾನಿಯ (Bhiwani) ಡಾಲರ್ ಕಾಲೋನಿಯ ಮನೆ ಮುಂದೆ ನಿಂತಿದ್ದ ವ್ಯಕ್ತಿ ಮೇಲೆ ಬೈಕ್ ಗಳಲ್ಲಿ ಬಂದ ನಾಲ್ಕೈದು ಮಂದಿ ದುಷ್ಕರ್ಮಿಗಳು ನೋಡ ನೋಡುತ್ತಲೇ ಆತನ ಮೇಲೆ ಗುಂಡು ಹಾರಿಸುತ್ತಾರೆ. ಈ ವೇಳೆ ಭಯಭೀತನಾದ ವ್ಯಕ್ತಿ ಓಡಿ ಬಂದು ಮನೆಯ ಗೇಟ್ ನೊಳಗೆ ನುಗ್ಗುತ್ತಾನೆ. ಆದರೆ ಆತನನ್ನು ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು ಗೇಟ್ ನ ಹೊರಗಿನಿಂದಲೇ ಗುಂಡು ಹಾರಿಸುತ್ತಿರುತ್ತಾರೆ. ಈ ವೇಳೆ ಎದುರುಮನೆಯ ಹಿರಿಯ ಮಹಿಳೆಯೊಬ್ಬರು ತಮ್ಮ ಕೈಗೆ ಸಿಕ್ಕ ಕಸಗೂಡಿಸುವ ಪೊರೆಕೆ ಹಿಡಿದು ಗುಂಡು ಹಾರಿಸುತ್ತಿದ್ದ ದುಷ್ಕರ್ಮಿಗಳ ಮೇಲೆ ದಾಳಿ ಮಾಡುತ್ತಾರೆ.

ಈ ವೇಳೆ ಮಹಿಳೆಯ ಆವೇಶಕ್ಕೆ ಹೆದರಿದ ದುಷ್ಕರ್ಮಿಗಳು ತಾವು ತಂದಿದ್ದ ಬೈಕ್ ಮೇಲೆ ಹತ್ತಿ ಪರಾರಿಯಾಗುತ್ತಾರೆ. ಮನೆಗೆ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಈ ಕುರಿತಾದ ದೃಶ್ಯಾವಳಿಯು ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರೀ ವೈರಲ್ ಆಗಿದೆ(Viral Video). ಈ ಮಹಿಳೆಯ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಅಂದಹಾಗೆ ಗುಂಡೇಟು ತಿಂದ ವ್ಯಕ್ತಿಯನ್ನು ಹರಿಕಿಶನ್ ಎಂದು ಗುರುತಿಸಲಾಗಿದೆ. ರವಿ ಬಾಕ್ಸರ್ ಹತ್ಯೆ ಪ್ರಕರಣದ ಆರೋಪಿ ಹರಿಕಿಶನ್ ಎಂಬಾತನಿಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಜೊತೆ ಸಂಪರ್ಕವಿದೆ ಎಂದು ಶಂಕಿಸಲಾಗಿದೆ. ಹರಿಕಿಶನ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಸುಮಾರು ಮೂರು ತಿಂಗಳ ಹಿಂದೆ ಭಿವಾನಿ ಪೊಲೀಸರು ಹರಿಕಿಶನ್ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿದ ಶಂಕಿತ ಐವರನ್ನು ಬಂಧಿಸಿದ್ದರು.

ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಭಿವಾನಿಯ ಡಾಬರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಶೂಟರ್‌ಗಳು ಒಂಬತ್ತು ಸುತ್ತು ಗುಂಡು ಹಾರಿಸಿದ್ದಾರೆ. ಹರಿಕಿಶನ್‌ಗೆ ನಾಲ್ಕು ಬುಲೆಟ್‌ ತಗುಲಿವೆ. ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಪಿಜಿಐಎಂಎಸ್ ರೋಹ್ಟಕ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ದೀಪಕ್ ತಿಳಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸುತ್ತಿದ್ದು, ಶೂಟರ್‌ಗಳು ಮತ್ತು ಅವರೊಂದಿಗೆ ಬಂದ ಇಬ್ಬರು ಸವಾರರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com