ಎರಡು ದಿನಗಳ G20 ಶೃಂಗಸಭೆಗೆ ತೆರೆ; ಭಾರತದ ಭದ್ರತಾ ಮಂಡಳಿ ಕಾಯಂ ಸ್ಥಾನಕ್ಕೆ ಆಗ್ರಹ
ದೆಹಲಿಯಲ್ಲಿ ನಡೆದ 2 ದಿನಗಳ ಜಿ20 ಶೃಂಗಸಭೆಗೆ ಅಧಿಕೃತವಾಗಿ ತೆರೆ ಬಿದ್ದಿದ್ದು, ಭಾರತದ ಭದ್ರತಾ ಮಂಡಳಿ ಕಾಯಂ ಸ್ಥಾನಕ್ಕೆ ಜಿ20 ನಾಯಕರು ಸೇರಿದಂತೆ ಭಾರತ ಆಗ್ರಹಿಸಿದೆ.
Published: 11th September 2023 12:43 AM | Last Updated: 11th September 2023 09:10 PM | A+A A-

ಜಿ20 ಶೃಂಗಸಭೆ
ನವದೆಹಲಿ: ದೆಹಲಿಯಲ್ಲಿ ನಡೆದ 2 ದಿನಗಳ ಜಿ20 ಶೃಂಗಸಭೆಗೆ ತೆರೆ ಬಿದ್ದಿದ್ದು, ಭಾರತದ ಭದ್ರತಾ ಮಂಡಳಿ ಕಾಯಂ ಸ್ಥಾನಕ್ಕೆ ಜಿ20 ನಾಯಕರು ಸೇರಿದಂತೆ ಭಾರತ ಆಗ್ರಹಿಸಿದೆ.
ದೆಹಲಿಯ ಪ್ರಗತಿ ಮೈದಾನದಲ್ಲಿನ ಭಾರತ ಮಂಟಪದಲ್ಲಿ ನಡೆದ ಜಿ20 ಶೃಂಗಸಭೆಗೆ ಅಧಿಕೃತ ತೆರೆ ಬಿದ್ದಿದ್ದು, ಸಭೆಗೆ ಹಾಜರಿದ್ದ ಎಲ್ಲ ವಿಶ್ವನಾಯಕರು ತಮ್ಮ ತಮ್ಮ ದೇಶಕ್ಕೆ ವಾಪಸಾಗಿದ್ದಾರೆ. ಭಾರತದ ಅಧ್ಯಕ್ಷತೆಯಲ್ಲಿ ಇದೇ ಮೊದಲ ಬಾರಿಗೆ ನಡೆದ 18ನೇ ಜಿ–20 ಶೃಂಗಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. 2 ದಿನಗಳ ಮಹಾ ಶೃಂಗಸಭೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಸ್ತರಣೆ, ಜಾಗತಿಕ ಮತ್ತು ಎಲ್ಲ ಜಾಗತಿಕ ಸಂಸ್ಥೆಗಳ ಸುಧಾರಣೆ ಹಲವು ನಿರ್ಣಾಯಕ ಅಂಶಗಳ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ವಿಶ್ವ ನಾಯಕರ ಶೃಂಗಸಭೆಯ ನಿರ್ಣಯಗಳು ಹಾಗೂ ಸಲಹೆಗಳನ್ನು ಪರಿಶೀಲಿಸಲು ನವೆಂಬರ್ ಅಂತ್ಯದಲ್ಲಿ ಒಂದು ವರ್ಚುವಲ್ ಸಮ್ಮೇಳನ ನಡೆಸುವ ಪ್ರಸ್ತಾವನೆಯನ್ನು ಮೋದಿ ಮುಂದಿಟ್ಟಿದ್ದಾರೆ.
ಇದನ್ನೂ ಓದಿ: 'ಭಾರತ ಸೂಪರ್ ಪವರ್ ರಾಷ್ಟ್ರ, ಚೀನಾಕ್ಕಿಂತ ಮುಂದಿದೆ': ಆಫ್ರಿಕನ್ ಒಕ್ಕೂಟದ ಪ್ರಶಂಸೆ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಸ್ತರಣೆ, ಜಾಗತಿಕ ಮತ್ತು ಎಲ್ಲ ಜಾಗತಿಕ ಸಂಸ್ಥೆಗಳ ಸುಧಾರಣೆಗೆ ಬಲವಾದ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಸಂಸ್ಥೆಗಳು ಜಗತ್ತಿನ ಹೊಸ ವಾಸ್ತವವನ್ನು ಪ್ರತಿಬಿಂಬಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ. ಈ ಮೂಲಕ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ದೊರೆಯಬೇಕು ಎಂಬ ಆಗ್ರಹವನ್ನು ಭಾರತವು ಪರೋಕ್ಷವಾಗಿ ಪುನರುಚ್ಚರಿಸಿದ್ದಾರೆ. ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಮಾನವ ಕೇಂದ್ರಿತ ನಿರ್ವಹಣೆಗಾಗಿ ರೂಪುರೇಷೆ ತಯಾರಿಸಲು ಅಂತರ ಸರ್ಕಾರಿ ಒಕ್ಕೂಟ ರಚಿಸಲು ಮೋದಿ ಸಲಹೆ ನೀಡಿದ್ದು, ‘ಸಮಯದೊಂದಿಗೆ ಬದಲಾಗದವರು ಪ್ರಸ್ತುತತೆ ಕಳೆದುಕೊಳ್ಳುತ್ತಾರೆ ಎಂಬುದು ನೈಸರ್ಗಿಕ ನಿಯಮ’ ಎಂಬ ಸಾರ್ವಕಾಲಿಕ ಸತ್ಯವನ್ನು ಎಚ್ಚರಿಸಿದ್ದಾರೆ.
ಮುಂದಿನ ಜಿ20 ಶೃಂಗಸಭೆ ಬ್ರೆಜಿಲ್‌ನಲ್ಲಿ ನಡೆಯಲಿದೆ. ಬ್ರೆಜಿಲ್ ಈ ವರ್ಷದ ಡಿಸೆಂಬರ್ 1ರಂದು ಜಿ20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ವಹಿಸಿಕೊಳ್ಳಲಿದೆ. ಸಮಾರೋಪ ಅಧಿವೇಶನದಲ್ಲಿ ಮೋದಿ ಅವರು ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವ ಅವರಿಗೆ ಅಧಿಕಾರ ದಂಡವನ್ನು ಹಸ್ತಾಂತರಿಸಿದರು. ಬಳಿಕ ಮೋದಿ ಅವರು ಬ್ರೆಜಿಲ್‌ಗೆ ಶುಭ ಹಾರೈಸಿದರು.
ಇದನ್ನೂ ಓದಿ: ಜಿ20 ಶೃಂಗಸಭೆ: ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್ ನಿಂದ ಹೊರಬಿದ್ದ ಇಟಲಿ, ಚೀನಾಕ್ಕೆ ಹೊಡೆತ!
ವಿಭಜಿತ ಜಿ20ಯಲ್ಲಿ ನಮಗೆ ಯಾವುದೇ ಆಸಕ್ತಿಯಿಲ್ಲ: ಬ್ರೆಜಿಲ್
ಇದೇ ವೇಳೆ ಮಾತನಾಡಿದ ಬ್ರೆಜಿಲ್ ಅಧ್ಯಕ್ಷರು, ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ರಾಜಕೀಯ ಸಬಲತೆಯನ್ನು ಮರಳಿ ಪಡೆಯಲು ಹೊಸ ಅಭಿವೃದ್ಧಿಶೀಲ ದೇಶಗಳನ್ನು ಕಾಯಂ ಹಾಗೂ ಕಾಯಂ ಅಲ್ಲದ ಸದಸ್ಯರನ್ನಾಗಿ ಸೇರಿಸುವ ಅಗತ್ಯ ಇದೆ’ ಎಂದು ಸಲಹೆ ನೀಡಿದರು. ಈ ಮೂಲಕ ನರೇಂದ್ರ ಮೋದಿ ಅವರ ಮಾತಿಗೆ ಬೆಂಬಲ ನೀಡಿದರು. ‘ವಿಭಜಿತ ಜಿ20ಯಲ್ಲಿ ನಮಗೆ ಯಾವುದೇ ಆಸಕ್ತಿಯಿಲ್ಲ. ನಮಗೆ ಸಂಘರ್ಷದ ಬದಲಿಗೆ ಶಾಂತಿ ಮತ್ತು ಸಹಕಾರ ಬೇಕು’ ಎಂದೂ ಅವರು ಹೇಳಿದರು. ಭೌಗೋಳಿಕ ರಾಜಕೀಯ ಸಮಸ್ಯೆಗಳು ತನ್ನ ಉದ್ದೇಶದ ದಿಕ್ಕು ತಪ್ಪಿಸಲು ಜಿ20 ಅನುವು ಮಾಡಿಕೊಡುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಜಿ–20 ಶೃಂಗಸಭೆಯ ಸಂದರ್ಭದಲ್ಲಿ ‘ಒಂದು ಭವಿಷ್ಯ’ ಕುರಿತು ಮಾತನಾಡಿದ ನರೇಂದ್ರ ಮೋದಿ, ‘ವಿಶ್ವವನ್ನು ಉತ್ತಮ ಭವಿಷ್ಯದ ಕಡೆಗೆ ಕೊಂಡೊಯ್ಯಲು ಜಾಗತಿಕ ವ್ಯವಸ್ಥೆಗಳು ಇಂದಿನ ವಾಸ್ತವಕ್ಕೆ ತಕ್ಕಂತೆ ಇರುವ ಅಗತ್ಯ ಇದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಹ ಇದಕ್ಕೊಂದು ಉದಾಹರಣೆ. ವಿಶ್ವಸಂಸ್ಥೆ ರಚನೆಯಾದಾಗ ಜಗತ್ತು ಈಗಿರುವುದಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು. ಆಗ 51 ಸಂಸ್ಥಾಪಕ ಸದಸ್ಯರು ಇದ್ದರು. ಇಂದು ವಿಶ್ವಸಂಸ್ಥೆ ಸೇರಿರುವ ದೇಶಗಳ ಸಂಖ್ಯೆ 200ರಷ್ಟು ಇದೆ.
ಇದನ್ನೂ ಓದಿ: G20 ಸದಸ್ಯರು ಹವಾಮಾನ ಹಣಕಾಸುಗಾಗಿ ದೇಶೀಯ ಸಂಪನ್ಮೂಲಗಳನ್ನು ಸಜ್ಜುಗೊಳಿಸಬೇಕು: IMF ಮುಖ್ಯಸ್ಥೆ
ಈ ಬೆಳವಣಿಗೆಯ ನಂತರವೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯರ ಸಂಖ್ಯೆ ಹಿಂದಿನಷ್ಟೇ ಉಳಿದಿದೆ. ಜಗತ್ತು ಸಾರಿಗೆ, ಸಂವಹನ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಎಲ್ಲ ವರ್ಗಗಳು ಬಹಳ ಪರಿವರ್ತನೆಗೊಂಡಿದೆ. ಈ ಹೊಸ ಪರಿವರ್ತನೆಗಳು ನಮ್ಮ ಜಾಗತಿಕ ರೂಪರೇಷೆಯಲ್ಲೂ ಪ್ರತಿಬಿಂಬಿಸಬೇಕು’ ಎಂದರು.