
ವಿಕೆ ಸಿಂಗ್
ಜೈಪುರ: ಪಾಕ್ ಆಕ್ರಮಿತ ಕಾಶ್ಮೀರ ತಾನಾಗಿಯೆ ಭಾರತದ ಭಾಗವಾಗಲಿದೆ ಎಂದು ಕೇಂದ್ರ ಸಚಿವ ವಿಕೆ ಸಿಂಗ್ ಹೇಳಿದ್ದಾರೆ.
ರಾಜಸ್ಥಾನದ ದೌಸಾದಲ್ಲಿ ಬಿಜೆಪಿಯ ಪರಿವರ್ತನ್ ಯಾತ್ರೆಯ ಭಾಗವಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜಿ-20 ಶೃಂಗಸಭೆಯನ್ನು ದೆಹಲಿಯಲ್ಲಿ ಯಶಸ್ವಿಯಾಗಿ ಆಯೋಜಿಸುವ ಮೂಲಕ ಭಾರತ ತನ್ನ ಸಾಮರ್ಥ್ಯ, ಶಕ್ತಿಯನ್ನು ಜಗತ್ತಿಗೆ ತೋರಿಸಿದೆ ಎಂದು ಹೇಳಿದ್ದಾರೆ.
ಶೀಘ್ರವೇ ಪಿಒಕೆ ತಾನಾಗಿಯೇ ಭಾರತದ ಭಾಗವಾಗಲಿದೆ ಎಂದು ಮಾಜಿ ಸೇನಾ ಮುಖ್ಯಸ್ಥರೂ ಆಗಿರುವ ಕೇಂದ್ರ ಸಚಿವರು ಹೇಳಿದ್ದಾರೆ. G20ಯ ವೈಭವ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ವಿಶಿಷ್ಟ ಗುರುತನ್ನು ತಂದುಕೊಟ್ಟಿದೆ, ಜಗತ್ತಿಗೆ ಭಾರತದ ಶಕ್ತಿ-ಸಾಮರ್ಥ್ಯಗಳು ಸಾಬೀತಾಗಿದೆ ಎಂದು ವಿಕೆ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಜಿ-20 ಸಭೆ ಅಭೂತಪೂರ್ವವಾಗಿತ್ತು. ಭಾರತವನ್ನು ಎಲ್ಲಾ ದೇಶಗಳೂ ಬಹಿರಂಗವಾಗಿ ಮುಕ್ತಕಂಠದಿಂದ ಶ್ಲಾಘಿಸಿವೆ ಎಂದು ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಹಾರಕ್ಕಾಗಿ ತೀವ್ರ ಹಾಹಾಕಾರ, ಸರ್ಕಾರದ ವಿರುದ್ಧ ಜನಾಕ್ರೋಶ
ಇದೇ ವೇಳೆ ರಾಜಸ್ಥಾನದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ವಿಕೆ ಸಿಂಗ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಹಾಗೂ ಯುವಕರು, ರೈತರಿಗೆ ನೀಡಿದ್ದ ಭರವಸೆಗಳನ್ನು ಈ ವರೆಗೂ ಈಡೇರಿಸಿಲ್ಲ ಎಂದು ಆರೋಪಿಸಿದ್ದಾರೆ.