ಮಧ್ಯ ಪ್ರದೇಶ: ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ; ಐವರು ಸಾವು, 8 ಮಂದಿಗೆ ಗಾಯ
ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ಬುಧವಾರ ಸಾಕು ಪ್ರಾಣಿಗಳನ್ನು ಮೇಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ...
Published: 13th September 2023 04:12 PM | Last Updated: 13th September 2023 08:07 PM | A+A A-

ಸಾಂದರ್ಭಿಕ ಚಿತ್ರ
ದಾತಿಯಾ: ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ಬುಧವಾರ ಸಾಕು ಪ್ರಾಣಿಗಳನ್ನು ಮೇಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ತವರು ಕ್ಷೇತ್ರದ ರೆಂಡಾ ಗ್ರಾಮದಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಡಾಂಗಿ ಮತ್ತು ಪಾಲ್ ಸಮುದಾಯದ ಸದಸ್ಯರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮೂರು ದಿನಗಳ ಹಿಂದೆ ಸಾಕು ಪ್ರಾಣಿಗಳನ್ನು ಮೇಯಿಸುವ ವಿಚಾರದಲ್ಲಿ ಪ್ರಕಾಶ್ ಡಾಂಗಿ ಮತ್ತು ಪ್ರೀತಮ್ ಪಾಲ್ ನಡುವೆ ವಾಗ್ವಾದ ನಡೆದಿತ್ತು ಎಂದು ದಾತಿಯಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪ್ರದೀಪ್ ಶರ್ಮಾ ಅವರು ತಿಳಿಸಿದ್ದಾರೆ.
ತೀವ್ರ ವಾಗ್ವಾದದ ಸಂದರ್ಭದಲ್ಲಿ, ಪ್ರಕಾಶ್ ಅವರು ಪ್ರೀತಮ್‌ಗೆ ಕಪಾಳಮೋಕ್ಷ ಮಾಡಿದ್ದರು. ಈ ಸಂಬಂಧ ಇಬ್ಬರೂ ದೂರು ನೀಡಿದ್ದು, ಎರಡೂ ಸಮುದಾಯಗಳ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ.
ಇದನ್ನು ಓದಿ: ಮಧ್ಯ ಪ್ರದೇಶ: ಅಸ್ವಸ್ಥ ಚಿರತೆ ಮೇಲೆ ಕುಳಿತು ಸವಾರಿಗೆ ಗ್ರಾಮಸ್ಥರು ಯತ್ನ!
ಇಂದು ಬೆಳಗ್ಗೆ ಎರಡು ಸಮುದಾಯಗಳ ಸದಸ್ಯರು ಮತ್ತೊಮ್ಮೆ ಮುಖಾಮುಖಿಯಾಗಿ ಗುಂಡಿನ ಚಕಮಕಿಯಲ್ಲಿ ತೊಡಗಿದ್ದು, ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ ಮತ್ತು ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಪ್ರಕಾಶ್ ಡಾಂಗಿ, ರಾಮ್ ನರೇಶ್ ಡಾಂಗಿ, ಸುರೇಂದ್ರ ಡಾಂಗಿ, ರಾಜೇಂದ್ರ ಪಾಲ್ ಮತ್ತು ರಾಘವೇಂದ್ರ ಪಾಲ್ ಸಾವನ್ನಪ್ಪಿದ್ದಾರೆ ಎಂದು ಪ್ರದೀಪ್ ಶರ್ಮಾ ಅವರು ಹೇಳಿದ್ದಾರೆ.
ಮೃತರೆಲ್ಲರೂ 30 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.