ಮಧ್ಯ ಪ್ರದೇಶದಲ್ಲಿ INDIA ರ್ಯಾಲಿ ರದ್ದು; ಇದಕ್ಕೆ 'ಸನಾತನ' ಹೇಳಿಕೆ ಕಾರಣ ಎಂದ ಸಿಎಂ ಚೌಹಾಣ್
ಅಕ್ಟೋಬರ್‌ನಲ್ಲಿ ಭೋಪಾಲ್‌ನಲ್ಲಿ ನಡೆಯಬೇಕಿದ್ದ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾದ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು ಶನಿವಾರ ಹೇಳಿದ್ದಾರೆ.
Published: 16th September 2023 08:04 PM | Last Updated: 16th September 2023 08:43 PM | A+A A-

India ಮೈತ್ರಿಕೂಟದ ನಾಯಕರು
ಭೋಪಾಲ್: ಅಕ್ಟೋಬರ್‌ನಲ್ಲಿ ಭೋಪಾಲ್‌ನಲ್ಲಿ ನಡೆಯಬೇಕಿದ್ದ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾದ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು ಶನಿವಾರ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಸನಾತನ ಧರ್ಮದ ಬಗ್ಗೆ ಡಿಎಂಕೆ ನಾಯಕರ ಟೀಕೆಯಿಂದ ಸಾರ್ವಜನಿಕರು ಕೋಪಗೊಂಡ ಕಾರಣ ಇಂಡಿಯಾ ರ್ಯಾಲಿ ರದ್ದುಗೊಳಿಸಲಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಈ ವಾರದ ಆರಂಭದಲ್ಲಿ, ಭಾರತೀಯ ಜನತಾ ಪಕ್ಷವನ್ನು ವಿರೋಧಿಸುವ ಕಾಂಗ್ರೆಸ್ ಮತ್ತು ಇತರ 25 ಕ್ಕೂ ಹೆಚ್ಚು ಪಕ್ಷಗಳನ್ನು ಒಳಗೊಂಡ ಇಂಡಿಯಾ ಮೈತ್ರಿಕೂಟ, ಭೋಪಾಲ್‌ನಲ್ಲಿ ಮೊದಲ ಸಾರ್ವಜನಿಕ ರ್ಯಾಲಿ ನಡೆಸುವುದಾಗಿ ಹೇಳಿತ್ತು.
ಇದನ್ನು ಓದಿ: ನಾವೆಲ್ಲರೂ ಸನಾತನ ಧರ್ಮವನ್ನು ನಂಬುತ್ತೇವೆ: ಮಧ್ಯ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್
"ಭೋಪಾಲ್‌ನಲ್ಲಿ ನಡೆಯಬೇಕಿದ್ದ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ" ಎಂದು ಕಮಲ್ ನಾಥ್ ಅವರು ಇಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಬಗ್ಗೆ ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು, ಭೋಪಾಲ್‌ನಲ್ಲಿ ಇಂಡಿಯಾ ರ್ಯಾಲಿಯ ಬಗ್ಗೆ ಪಕ್ಷದ ಮುಖ್ಯಸ್ಥರು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು.
"ಅಂತಿಮ ನಿರ್ಧಾರ ತೆಗೆದುಕೊಂಡ ನಂತರ ನಾವು ಖಚಿತಪಡಿಸುತ್ತೇವೆ" ಎಂದು ಸುರ್ಜೆವಾಲಾ ಅವರು ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ನಡೆದ ಸಭೆಯ ನಂತರ, ವಿಪಕ್ಷ ಮೈತ್ರಿಕೂಟವು ಅಕ್ಟೋಬರ್ ಮೊದಲ ವಾರದಲ್ಲಿ ಭೋಪಾಲ್‌ನಲ್ಲಿ ತಮ್ಮ ಮೊದಲ ಜಂಟಿ ರ್ಯಾಲಿ ನಡೆಸಲು ನಿರ್ಧರಿಸಿತ್ತು.