‘ಹೊಸ ಸಂಸತ್ತಿನಲ್ಲಿ ರಾಷ್ಟ್ರಪತಿಗಳನ್ನು ನೋಡಲು ಬಯಸಿದ್ದೆ, ಏಕೆ ಆಹ್ವಾನಿಸಲಿಲ್ಲ’: ರಾಹುಲ್ ಗಾಂಧಿ
ಮಹಿಳೆ ಮತ್ತು ಉನ್ನತ ಹುದ್ದೆ ಅಲಂಕರಿಸಿದ ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನೂತನ ಸಂಸತ್ ಭವನದ ಉದ್ಘಾಟನೆಗೆ ಏಕೆ ಆಹ್ವಾನಿಸಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪ್ರಶ್ನಿಸಿದ್ದಾರೆ.
Published: 21st September 2023 03:00 PM | Last Updated: 21st September 2023 03:00 PM | A+A A-

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾತನಾಡಿದರು.
ನವದೆಹಲಿ: ಮಹಿಳೆ ಮತ್ತು ಉನ್ನತ ಹುದ್ದೆ ಅಲಂಕರಿಸಿದ ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನೂತನ ಸಂಸತ್ ಭವನದ ಉದ್ಘಾಟನೆಗೆ ಏಕೆ ಆಹ್ವಾನಿಸಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪ್ರಶ್ನಿಸಿದ್ದಾರೆ.
'ನಾನು ಭಾರತದ ರಾಷ್ಟ್ರಪತಿಯನ್ನು ಈ ಆವರಣದಲ್ಲಿ ನೋಡಲು ಬಯಸಿದ್ದೆ. ಭಾರತದ ರಾಷ್ಟ್ರಪತಿ ಒಬ್ಬ ಮಹಿಳೆ. ಅಲ್ಲದೆ, ಅವರು ಬುಡಕಟ್ಟು ಸಮುದಾಯವನ್ನು ಪ್ರತಿನಿಧಿಸುತ್ತಾರೆ. ಒಂದು ಮನೆಯಿಂದ ಇನ್ನೊಂದು ಮನೆಗೆ ನಡೆಯುವ ಈ ವರ್ಗಾವಣೆಯಲ್ಲಿ ಅವರ ಉಪಸ್ಥಿತಿಯು ಸೂಕ್ತವಾಗಿರುತ್ತದೆ' ಎಂದು ಅವರು ಹೇಳಿದರು.
ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಕೂಡ ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಗಳ ಗೈರು ಹಾಜರಿಯನ್ನು ಪ್ರಶ್ನಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಸಾಂವಿಧಾನಿಕ (128ನೇ ತಿದ್ದುಪಡಿ) ಮಸೂದೆ, 2023ರ ಮೇಲಿನ ಚರ್ಚೆಯನ್ನು ಆರಂಭಿಸಿದ ರಂಜನ್, 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ಭರವಸೆ ನೀಡಿದ್ದರೂ ಕೂಡ ಮಸೂದೆಯನ್ನು ಮಂಡಿಸಲು ಬಿಜೆಪಿಗೆ ಒಂಬತ್ತೂವರೆ ವರ್ಷ ಏಕೆ ಬೇಕಾಯಿತು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಒಬಿಸಿ ಕೋಟಾ ಇಲ್ಲದೆ ಮಹಿಳಾ ಮೀಸಲಾತಿ ಮಸೂದೆ ಅಪೂರ್ಣ: ಲೋಕಸಭೆಯಲ್ಲಿ ರಾಹುಲ್ ಗಾಂಧಿ
'ಹೊಸ ಸಂಸತ್ ಕಟ್ಟಡದ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಏಕೆ ಆಹ್ವಾನಿಸಲಿಲ್ಲ ಎಂದು ನಾನು ಕೇಳಲು ಬಯಸುತ್ತೇನೆ. ಅವರು ಮಹಿಳೆ ಮತ್ತು ಬುಡಕಟ್ಟು ಸಮುದಾಯದಿಂದ ಬಂದವರು' ಎಂದು ಅವರು ಹೇಳಿದರು.
ತನ್ನ ಪಕ್ಷವು ಮಸೂದೆಯನ್ನು ಬೆಂಬಲಿಸುತ್ತದೆ ಎಂದು ಹೇಳಿದ ರಂಜನ್, ಸಾಮಾನ್ಯ ಅಧಿವೇಶನದಲ್ಲಿಯೇ ಅದನ್ನು ಮಂಡಿಸಿ, ಅಂಗೀಕರಿಸುವ ಬದಲು ಇದಕ್ಕಾಗಿ ವಿಶೇಷ ಅಧಿವೇಶನ ಕರೆಯುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.
'2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಮಹಿಳೆಯರನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದ ಅವರು, 'ಲೈಮ್‌ಲೈಟ್ ಲೇನೆ ಕೆ ಆದತ್ ಹೈ (ಪ್ರಸಿದ್ಧಿ ಪಡೆಯುವುದು ಅಭ್ಯಾಸವಾಗಿದೆ). ನೋಟು ಅಮಾನ್ಯೀಕರಣದ ಮೊದಲು ಯಾರನ್ನೂ ಸಂಪರ್ಕಿಸಿಲ್ಲ ಮತ್ತು ನಿಷೇಧಿತ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ವೇಳೆ 155 ಜನರು ಸಾವಿಗೀಡಾಗಿದ್ದಾರೆ ಎಂದು ಅವರು ಹಲವಾರು ವಿಷಯಗಳಲ್ಲಿ ಸರ್ಕಾರದ ಉದ್ದೇಶಗಳ ಬಗ್ಗೆ ಪ್ರಶ್ನಿಸಿದರು.
ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಕೂಡ ಸೇರಿಸಬೇಕು; ತಕ್ಷಣ ಜಾರಿಗೊಳಿಸಿ: ಸೋನಿಯಾ ಗಾಂಧಿ
ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಪರಿಚಯಿಸಿದಾಗಲೂ ಅದು (ಕೇಂದ್ರ ಸರ್ಕಾರ) ಯಾರನ್ನೂ ಸಂಪರ್ಕಿಸಲಿಲ್ಲ, ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಿಜೆಪಿ ಸಂಸದರ ವಿರುದ್ಧ ಮಹಿಳಾ ಕುಸ್ತಿಪಟುಗಳು ಪ್ರತಿಭಟಿಸಿದಾಗ ಮತ್ತು ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿದಾಗಲೂ ಸರ್ಕಾರದಲ್ಲಿ ಯಾರೊಬ್ಬರೂ ಮಾತನಾಡಲಿಲ್ಲ ಎಂದು ಆರೋಪಿಸಿದರು.
ಹೊಸ ಜನಗಣತಿ ಮತ್ತು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ನಂತರವೇ ಮಹಿಳಾ ಮೀಸಲಾತಿಯನ್ನು ಪರಿಚಯಿಸಲಾಗುತ್ತದೆ ಎಂಬ ಕೇಂದ್ರದ ವಾದವನ್ನು ರಂಜನ್ ಪ್ರಶ್ನಿಸಿದ್ದಾರೆ.
'ನೀವು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿದ ನಂತರ ಮಹಿಳೆಯರಿಗೆ ಮೀಸಲಾತಿ ನೀಡಲು ಬಯಸುತ್ತೀರಿ. ಈಗಿರುವ ಸ್ಥಾನಗಳಲ್ಲಿ ಅವರಿಗೆ ಏಕೆ ಪಾಲು ನೀಡಬಾರದು?'. ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾದಂತೆಯೇ ಒಬಿಸಿಗಳಿಗೂ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.