ಅರುಣಾಚಲ ಪ್ರದೇಶ ಕ್ರೀಡಾಪಟುಗಳಿಗೆ ಪ್ರವೇಶ ನಿರಾಕರಿಸಿದ ಚೀನಾ: ಭಾರತ ಪ್ರತಿಭಟನೆ
ಹ್ಯಾಂಗ್ಝೌ ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲಿ ಅರುಣಾಚಲ ಪ್ರದೇಶ ಕ್ರೀಡಾಪಟುಗಳಿಗೆ ಮಾನ್ಯತೆ ನೀಡದೇ ಇರುವ ಚೀನಾ ನಡೆಗೆ ಭಾರತ ತೀವ್ರ ಪ್ರತಿಭಟನೆಯೊಡ್ಡಿದೆ.
Published: 22nd September 2023 04:04 PM | Last Updated: 22nd September 2023 07:57 PM | A+A A-

ಭಾರತ ಮತ್ತು ಚೀನಾದ ರಾಷ್ಟ್ರ ಧ್ವಜಗಳ ಸಾಂದರ್ಭಿಕ ಚಿತ್ರ
ನವದೆಹಲಿ: ಹ್ಯಾಂಗ್ಝೌ ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲಿ ಅರುಣಾಚಲ ಪ್ರದೇಶ ಕ್ರೀಡಾಪಟುಗಳಿಗೆ ಮಾನ್ಯತೆ ನೀಡದೇ ಇರುವ ಚೀನಾ ನಡೆಗೆ ಭಾರತ ತೀವ್ರ ಪ್ರತಿಭಟನೆಯೊಡ್ಡಿದೆ.
ಚೀನಾದ ನಡೆ ಇಡೀ ಕ್ರೀಡಾಕೂಟ ಹಾಗೂ ಅದರ ನೀತಿಸಹಿಂತೆಯ ಸ್ಪೂರ್ತಿಯನ್ನು ಹಾಳುಮಾಡುತ್ತದೆ ಎಂದು ಭಾರತ ಹೇಳಿದೆ.
ಮಾಧ್ಯಮ ವರದಿಗಳ ಪ್ರಕಾರ, ಅರುಣಾಚಲ ಪ್ರದೇಶದ ಮೂವರು ಮಹಿಳಾ ಸಮರ ಕಲೆ ಕುಸ್ತಿಪಟುಗಳಿಗೆ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಆಯೋಜನಾ ಸಮಿತಿಯು ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅನುಮೋದನೆ ನೀಡಿತ್ತು.
ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ 2023 ಆಯೋಜನಾ ಸಮಿತಿಯಿಂದ ಭಾಗವಹಿಸಲು ಅನುಮೋದಿಸಲಾದ ಅರುಣಾಚಲ ಪ್ರದೇಶದ ಇಬ್ಬರು ವುಶು ಆಟಗಾರರಾದ, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ತಮ್ಮ ಮಾನ್ಯತೆ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ. ಈ ಮಾನ್ಯತೆ ಕಾರ್ಡ್‌ಗಳು ಚೀನಾಕ್ಕೆ ಪ್ರವೇಶಿಸಲು ವೀಸಾಗಳಾಗಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಜಿ-20 ಆಯೋಜನೆಗೆ ಚೀನಾ ಆಕ್ಷೇಪ: ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು ಅಂದರೆ...
ತನ್ನ ಮಾನ್ಯತೆಯನ್ನು ಡೌನ್‌ಲೋಡ್ ಮಾಡುವಲ್ಲಿ ಯಶಸ್ವಿಯಾದ ಮೂರನೇ ಅಥ್ಲೀಟ್ ನೈಮನ್ ವಾಂಗ್ಸು ಅವರಿಗೆ, ಹಾಂಗ್ ಕಾಂಗ್‌ನ ಆಚೆಗೆ ಪ್ರಯಾಣಿಸಲು ಅನುಮತಿಸುವುದಿಲ್ಲ ಎಂದು ತಿಳಿಸಲಾಯಿತು.
ಅಥ್ಲೀಟ್‌ಗಳು ಮಾರ್ಷಲ್ ಆರ್ಟ್ಸ್ ಕ್ರೀಡೆಯ ವೈಯಕ್ತಿಕ ವಿಭಾಗಗಳಲ್ಲಿ ಭಾಗವಹಿಸಬೇಕಿತ್ತು.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಚೀನಾದ ತಾರತಮ್ಯ ಧೋರಣೆಗೆ ಭಾರತ ಪ್ರತಿಭಟನೆ ವ್ಯಕ್ತಪಡಿಸಿದೆ. ಕ್ರೀಡಾಕೂಟಕ್ಕೆ ತೆರಳಬೇಕಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ತಮ್ಮ ಭೇಟಿಯನ್ನು ರದ್ದುಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಭಾರತವು 'ನಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಸೂಕ್ತ ಕ್ರಮಗಳನ್ನು' ತೆಗೆದುಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ಬಾಗ್ಚಿ ಹೇಳಿದರು.