ಹೊಸ ಸಂಸತ್ ಭವನವನ್ನು ‘ಮೋದಿ ಮಲ್ಟಿಪ್ಲೆಕ್ಸ್’​ ಎಂದು ಕರೆದ ಜೈರಾಮ್ ರಮೇಶ್: ಬಿಜೆಪಿ ತೀವ್ರ ಕಿಡಿ

ನೂತನ ಸಂಸತ್ ಭವನವನ್ನು ಮೋದಿ ಮಲ್ಟಿಪ್ಲೆಕ್ಸ್ ಅಥವಾ ಮೋದಿ ಮ್ಯಾರಿಯೆಟ್ ಎಂದು ಕರೆಯಬೇಕೆಂದು ಟೀಕೆ ಮಾಡಿದ್ದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಜೆಪಿ ನಡ್ಡಾ
ಜೆಪಿ ನಡ್ಡಾ

ನವದೆಹಲಿ: ನೂತನ ಸಂಸತ್ ಭವನವನ್ನು ಮೋದಿ ಮಲ್ಟಿಪ್ಲೆಕ್ಸ್ ಅಥವಾ ಮೋದಿ ಮ್ಯಾರಿಯೆಟ್ ಎಂದು ಕರೆಯಬೇಕೆಂದು ಟೀಕೆ ಮಾಡಿದ್ದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.

ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು, ಕಾಂಗ್ರೆಸ್ ಇಷ್ಟು ಕೆಳಮಟ್ಟದಲ್ಲಿ ಯೋಚಿಸುತ್ತದೆ ಎಂದು ನಾನಂದುಕೊಂಡಿರಲಿಲ್ಲ, ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳಿಗೆ ಮಾಡಿದ ಅವಮಾನವಲ್ಲದೆ ಬೇರೇನೂ ಇಲ್ಲ. ಕಾಂಗ್ರೆಸ್ ಸಂಸತ್ತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಅವರು 1975 ರಲ್ಲಿ ಪ್ರಯತ್ನಿಸಿದರು ಮತ್ತು ಅದು ಶೋಚನೀಯವಾಗಿ ವಿಫಲವಾಯಿತು ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಹಿಂದೆ ಟ್ವೀಟ್ ಮಾಡಿದ್ದ ಜೈರಾಮ್ ರಮೇಶ್ ಅವರು, ನೂತನ ಸಂಸತ್ ಭವನ ಕುರಿತು ಸುದೀರ್ಘ ಪೋಸ್ಟ್ ಹಾಕಿ ಟೀಕೆ ಮಾಡಿದ್ದರು.

ಹಳೇ ಸಂಸತ್‌ ಭವನವನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ, ಹೊಸ ಕಟ್ಟಡ ಕ್ಲಾಸ್ಟ್ರೋಫೋಬಿಕ್‌ ಮತ್ತು ಜಟಿಲವಾಗಿದೆ. ಭರ್ಜರಿ ಪ್ರಚಾರದೊಂದಿಗೆ ಆರಂಭಿಸಲಾದ ಹೊಸ ಸಂಸತ್‌ ಭವನವು ನಿಜವಾಗಿಯೂ ಪ್ರಧಾನಿಯವರ ಉದ್ದೇಶಗಳನ್ನು ಚೆನ್ನಾಗಿ ಅರಿತುಕೊಂಡಿದೆ. ಇದನ್ನು ಮೋದಿ ಮಲ್ಟಿಪ್ಲೆಕ್ಸ್ ಅಥವಾ ಮೋದಿ ಮ್ಯಾರಿಯೆಟ್ ಎಂದು ಕರೆಯಬೇಕು.

ಎರಡು ಸದನಗಳಲ್ಲಿ ಸಂಭಾಷಣೆಗಳ ಸಾವಾಗಿರುವುದನ್ನು ನಾನು ನಾಲ್ಕು ದಿನಗಳಲ್ಲಿ ಹೊಸ ಪಾರ್ಲಿಮೆಂಟ್‌ ಕಟ್ಟಡದಲ್ಲಿ ಕಂಡಿದ್ದೇನೆ. ವಾಸ್ತುಶಿಲ್ಪವು ಪ್ರಜಾಪ್ರಭುತ್ವವನ್ನು ಕೊಲ್ಲಬಹುದಾದರೆ, ಈಗಾಗಲೇ ಪ್ರಧಾನಿ ಸಂವಿಧಾನವನ್ನು ಬದಲಾಯಿಸದೇ ಪ್ರಜಾಪ್ರಭುತ್ವವನ್ನು ನಾಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದ ಅವರು, ಹೊಸ ಕಟ್ಟಡದ ಸಭಾಂಗಣಗಳು ಆರಾಮದಾಯಕವಾಗಿಲ್ಲ.

ಹಾಲ್‌ಗಳು ಸರಳವಾಗಿ ಅಥವಾ ಸಾಂದ್ರವಾಗಿಲ್ಲದ ಕಾರಣ ಪರಸ್ಪರ ನೋಡಲು ಬೈನಾಕ್ಯುಲರ್‌ಗಳ ಅಗತ್ಯವಿದೆ. ಹಳೇ ಸಂಸತ್ತಿನ ಕಟ್ಟಡವು ಕೇವಲ ಆಕರ್ಷಕವಾಗಿ ಮಾತ್ರ ಇಲ್ಲದೆ ಸಂಭಾಷಣೆಗಳನ್ನು ಸುಗಮಗೊಳಿಸಿತ್ತು. ಸದನಗಳು, ಸೆಂಟ್ರಲ್ ಹಾಲ್ ಮತ್ತು ಕಾರಿಡಾರ್‌ಗಳ ನಡುವೆ ನಡೆದಾಡಲು ಸುಲಭವಾಗಿತ್ತು. ಆದರೆ, ಹೊಸ ಕಟ್ಟಡ ಸಂಸತ್ತಿನ ಚಾಲನೆಯನ್ನು ಯಶಸ್ವಿಗೊಳಿಸಲು ಬೇಕಾದ ಬಂಧವನ್ನು ದುರ್ಬಲಗೊಳಿಸುತ್ತದೆ.

ಎರಡು ಸದನಗಳ ನಡುವಿನ ತ್ವರಿತ ಸಮನ್ವಯ ಈಗ ಸಾಧ್ಯವಾಗುತ್ತಿಲ್ಲ. ಹಳೇ ಕಟ್ಟಡದಲ್ಲಿ ನೀವು ಕಳೆದುಹೋದರೆ ಅದು ವೃತ್ತಾಕಾರವಾಗಿರುವುದರಿಂದ ನೀವು ಮತ್ತೆ ನಿಮ್ಮ ದಾರಿಯನ್ನು ಕಂಡುಕೊಳ್ಳುತ್ತಿದ್ರಿ. ಆದರೆ, ಹೊಸ ಕಟ್ಟಡದಲ್ಲಿ ನೀವು ದಾರಿ ತಪ್ಪಿದರೆ, ನೀವು ಜಟಿಲ ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತೀರಿ. ಹಳೇ ಕಟ್ಟಡವು ನಿಮಗೆ ಸ್ಥಳಾವಕಾಶ ಮತ್ತು ಮುಕ್ತತೆಯ ಪ್ರಜ್ಞೆಯನ್ನು ನೀಡಿದ್ದರೆ, ಹೊಸದು ಬಹುತೇಕ ಕ್ಲಾಸ್ಟ್ರೋಫೋಬಿಕ್ ಆಗಿದೆ. ನೂತನ ಸಂಸತ್ ಭವನ ನೋವು ಮತ್ತು ಯಾತನೆಯಿಂದ ಕೂಡಿದ್ದು, ಸಂಸತ್ತಿನಲ್ಲಿ ಸುತ್ತಾಡುವ ಖುಷಿಯೇ ಹೋಗಿದೆ.

ಸಂಸತ್‌ನಲ್ಲಿ ಸುಮ್ಮನೆ ಸುತ್ತಾಡುವ ಆನಂದ ಮಾಯವಾಗಿದೆ. ನಾನು ಹಳೇ ಕಟ್ಟಡಕ್ಕೆ ಹೋಗಲು ಎದುರು ನೋಡುತ್ತಿದ್ದೆ. ಹೊಸ ಸಂಸತ್‌ ಭವನ ನೋವಿನಿಂದ ಕೂಡಿದೆ, ನನ್ನ ಅನೇಕ ಸಹೋದ್ಯೋಗಿಗಳಿಗೆ ಕೂಡ ಇದೇ ರೀತಿ ಭಾಸವಾಗುತ್ತಿದೆ ಎಂಬ ಖಾತ್ರಿ ನನಗಿದೆ. ಹೊಸ ಕಟ್ಟಡದ ವಿನ್ಯಾಸವು ಅಲ್ಲಿ ಕೆಲಸ ಮಾಡುವ ವಿವಿಧ ಸೆಕ್ರೆಟರಿಯೇಟ್‌ನಲ್ಲಿರುವ ಸಿಬ್ಬಂದಿಗಳ ಕಾರ್ಯಕ್ಕೆ ಅನುಕೂಲವಾಗಿಲ್ಲ. ಅವರ ಜೊತೆ ಯಾವುದೇ ಸಮಾಲೋಚನೆ ನಡೆಸದೇ ಕಟ್ಟಡ ಕಟ್ಟಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದ್ದರು. ಈ ಪ್ರತಿಕ್ರಿಯೆಗೆ ಬಿಜೆಪಿಯಿಂದ ತೀವ್ರ ಟೀಕೆಗಳು ವ್ಯಕ್ತವಾಗತೊಡಗಿವೆ.

ಹೊಸ ಸಂಸತ್‌ ಭವನವನ್ನು ಮೇ 28ರಂದು ಉದ್ಘಾಟಿಸಲಾಯಿತು. ಸೆಪ್ಟೆಂಬರ್‌ 19ರಂದು ಗಣೇಶ ಚತುರ್ಥಿಯ ದಿನದಂದು ಹೊಸ ಸಂಸತ್‌ ಭವನಕ್ಕೆ ಪ್ರವೇಶಿಸಲಾಯಿತು. ಹಳೇ ಸಂಸತ್‌ ಭವನಕ್ಕೆ ಸಂವಿಧಾನ ಸದನ ಎಂದು ನಾಮಕರಣ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com